ಕ್ರೈಂ ಸುದ್ದಿ
ಬಾಲಕಿ ಮೇಲೆ ಟಾಯ್ಲಟ್ ಆಸಿಡ್ ಪ್ರಕರಣ | ಮುಖ್ಯ ಶಿಕ್ಷಕ ಅಮಾನತು
ಚಿತ್ರದುರ್ಗ ನ್ಯೂಸ್.ಕಾಂ: ಬಾಲಕಿ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಬಿದ್ದು ಸುಟ್ಟ ಗಾಯಗಳಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಶಾಲೆ ಮುಖ್ಯಶಿಕ್ಷಕ ಜಿ.ರಂಗಸ್ವಾಮಿ ಅವರನ್ನು ಅಮಾನತು ಮಾಡಿ ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ದಸರಾ ರಜೆ ಮುಗಿದ ನಂತರ ಶಾಲೆ ತೆರೆದ ಮೊದಲ ದಿನವೇ ಶಾಲಾ ಸ್ವಚ್ಛತೆ ವೇಳೆ 2ನೇ ತರಗತಿ ವಿದ್ಯಾರ್ಥಿನಿ 8 ವರ್ಷದ ಸಿಂಚನಾ ಬೆನ್ನಿನ ಮೇಲೆ ಆಸಿಡ್ ಚೆಲ್ಲಿ ಸುಟ್ಟ ಗಾಯಗಳಾಗಿದ್ದವು.
ಇದನ್ನೂ ಓದಿ: ಬಾಲಕಿ ಬೆನ್ನ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆಸಿಡ್
ಈ ಪ್ರಕರಣ ಸಂಬಂಧ, ಗ್ರಾಮಸ್ಥರು ಹಾಗೂ ಪೋಷಕರು ಮುಖ್ಯ ಶಿಕ್ಷಕರ ವಿರುದ್ಧ ಆರೋಪ ಮಾಡಿದ್ದರು. ಒತ್ತಾಯಪೂರ್ವಕವಾಗಿ ಶೌಚಾಲಯ ಸ್ವಚ್ಛಗೊಳಿಸಲು ಹೇಳಿ, ಸ್ವಚ್ಛಗೊಳಿಸದ ಕಾರಣಕ್ಕೆ ಸಿಟ್ಟಿನಿಂದ ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಎರಚಿದ್ದಾರೆ ಎಂದು ದೂರಿದ್ದರು.
ಅ.25 ಬುಧವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಮುಖ್ಯ ಶಿಕ್ಷಕರು ಶೌಚಾಲಯ ಸ್ವಚ್ಛಗೊಳಿಸುವ ಸಂಬಂಧ ದ್ರಾವಣ ಸಿದ್ಧಪಡಿಸುವಾಗ ವಿದ್ಯಾರ್ಥಿನಿ ಸಿಂಚನಾ ಮೇಲೆ ಕೋಪಗೊಂಡು ಗದರಿ ಹಿಂದೆ ಸರಿಸುವಾಗ ಕೈಯಲ್ಲಿದ್ದ ದ್ರಾವಣ ಸಿಂಚನಾ ಬೆನ್ನ ಮೇಲೆ ಚೆಲ್ಲಿದ್ದು, ಇದರಿಂದ ವಿದ್ಯಾರ್ಥಿನಿಯ ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿವೆ. ಇದರಿಂದ ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನ ತೋರಿರುವುದು ಕಂಡು ಬಂದಿದೆ. ಆದ ಕಾರಣ ಶಿಸ್ತು ಕ್ರಮ ಜರುಗಿಸಲು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಫಾರಸ್ಸು ಮಾಡಿದ್ದರು.
ಇದನ್ನೂ ಓದಿ: ರೈತರ ಬೇಡಿಕೆಯಂತೆ ವಿದ್ಯುತ್ ಸರಬರಾಜು
ಶಿಫಾರಸ್ಸಿನ ಅನ್ವಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಂಗಸ್ವಾಮಿ ಅವರ ಮೇಲೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು:
ಇನ್ನೂ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕರಾದ ರಂಗಸ್ವಾಮಿ ವಿರುದ್ಧ ಬಾಲಕಿಯ ತಾಯಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.