ತಾಲೂಕು
ಹಂಸಲೇಖ ಮೆಚ್ಚಿಕೊಂಡ ಹೊಸದುರ್ಗದ ಸಂಗೀತ ವಾದ್ಯ ಯಾವುದು ಗೊತ್ತಾ
ಚಿತ್ರದುರ್ಗ ನ್ಯೂಸ್.ಕಾಂ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸಂಗೀತ ಶಾಸ್ತ್ರಕ್ಕೆ ತಳಪಾಯವಿದ್ದಂತೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಪ್ರಶಂಸೆ ವ್ಯಕ್ತಪಡಿಸಿದರು.
ಹೊಸದುರ್ಗ ಪಟ್ಟಣದ ಟಿ.ಬಿ.ವೃತ್ತದ ಅಯೋಧ್ಯೆ ಮಂಟಪದಲ್ಲಿ ಶನಿವಾರ ಇಲ್ಲಿನ ನಾಗರೀಕ ವೇದಿಕೆಯಿಂದ ಹಮ್ಮಿಕೊಂಡಿದ್ದ ನಾದಬ್ರಹ್ಮ ಹಂಸಲೇಖ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಗೀತ ಹುಟ್ಟುವುದು ಗಾಣೆಯಿಂದ. ಅಂತಹ ಗಾಣೆಗಳು ಹೊಸದುರ್ಗದಲ್ಲಿದ್ದವು. ಹಾಗಾಗಿ ಹೊಸದುರ್ಗ ಕಲಾವಿದರ ಬೀಡು ಎಂದು ತಿಳಿಸಿದರು.
ನಾನು ಏಳನೇ ತರಗತಿ ಫೇಲ್ ಆಗಿದ್ದೆ. ಆದರೆ, ನನಗೆ ಮುದ್ರಣಾಲಯವೇ ವಿಶ್ವವಿದ್ಯಾಲಯವಾಯಿತು. ನಾನು ಎಂ.ಎ ಕನ್ನಡ ಪರೀಕ್ಷೆ ಬರೆಯಲು ಹೋಗಿದ್ದಾಗ ನಾನೇ ಬರೆದ ಪದ್ಯವೊಂದು ಏಳನೇ ತರಗತಿಯ ಪಠ್ಯ ಪುಸ್ತಕದಲ್ಲಿದೆ ಎಂದು ಗೊತ್ತಾಗಿತ್ತು. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು.
ಸಮಾಜದಲ್ಲಿ ಶೋಷಿತರಿಗೆ ಶಕ್ತಿ ತುಂಬಬೇಕು. ಶಕ್ತಿ ಇಲ್ಲದವನಿಗೆ ಶಕ್ತಿ ನೀಡಬೇಕು. ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದೇ ಸಂವಿಧಾನದ ಆಶಯ. ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾಡಿನಾದ್ಯಂತ ಅಭಿನಂದಿಸುತ್ತಿದ್ದಾರೆ. ಅಲ್ಲಿ ದೀಪ ಹಚ್ಚುವ ಕೈಗಳು ನನ್ನದು. ಅದರ ಹಿಂದಿರುವ ಚೈತನ್ಯ ರಾಜ್ಯದ ಜನರದ್ದು ಎಂದು ಹೇಳಿದರು.
ಸಾಣೇಹಳ್ಳಿ ಡಾ.ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹುಡುಕಿ ಮುನ್ನೆಲೆಗೆ ತರುವ ಕೆಲಸವನ್ನು ಹಂಸಲೇಖ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಸನ್ಮಾನಿಸಿರುವುದು ಹೊಸದುರ್ಗದ ಹಿರಿಮೆ ಹೆಚ್ಚಿಸಿದೆ ಎಂದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬೆಲಗೂರಿನ ಶ್ರೀ ಮಾರುತಿ ವಿಜಯ ಸ್ವಾಮೀಜಿ, ನಾಗರೀಕ ವೇದಿಕೆ ಅಧ್ಯಕ್ಷ ಗೋ.ತಿಪ್ಪೇಶ್, ಸಾಹಿತಿಗಳಾದ ಚಂದ್ರಶೇಖರ್ ತಾಳ್ಯ, ಮಂಜಪ್ಪ ಮಾಗೋದಿ, ಉದ್ಯಮಿ ದಿಲೀಪ್ ಸೇರಿದಂತೆ ಹೊಸದುರ್ಗ ಪಟ್ಟಣದ ನಾಗರೀಕರು, ಹಂಸಲೇಖ ಅಭಿಮಾನಿಗಳು ಭಾಗವಹಿಸಿದ್ದರು.