ಮುಖ್ಯ ಸುದ್ದಿ
ಅತಿಥಿ ಉಪನ್ಯಾಸಕರಿಂದ ತರಕಾರಿ, ಹಣ್ಣು ಮಾರಾಟ; ತಕ್ಕಡಿ ಹಿಡಿಯಿತು ಚಾಕ್ಪೀಸ್ ಕೈ
ಚಿತ್ರದುರ್ಗನ್ಯೂಸ್.ಕಾಂ
ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಸೋಮವಾರ 19 ನೇ ಧರಣಿ ಕಾಲಿಟ್ಟಿದ್ದು, ಧರಣಿ ಸ್ಥಳದಲ್ಲಿ ತರಕಾರಿ, ಹಣ್ಣು ಮಾರಾಟ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಕೈಯಲ್ಲಿ ತಕ್ಕಡಿ ಹಿಡಿದು ತರಕಾರಿ ಮಾರಾಟ ಪ್ರಾರಂಭಿಸಿದರು. ಅಕ್ಕ ಬನ್ನಿ ಅಕ್ಕ…ತಾಜಾ ಅವರೆಕಾಯಿ ನೂರಕ್ಕೆ 2 ಕೆಜಿ, ಸೀತಾಫಲ ಕೆಜಿಗೆ 100 ರೂ., ಹೀಗೆ ಕೂಗುತ್ತಾ ಗ್ರಾಹಕರನ್ನು ಸೆಳೆದರು. ಕಾರ ಮಂಡಕ್ಕಿ, ಟ್ಯೊಮ್ಯೊಟೊ, ಚಕ್ಕಲಿ, ಕೊಡುಬಳೆ ಹೀಗೆ ವಿವಿಧ ತರಕಾರಿ, ತಿನಿಸುಗಳನ್ನು ಮಾರಾಟ ಮಾಡಿದರು.
ಪರಿಸರ ಸ್ನೇಹಿಯಾಗಿ ಪೇಪರ್ ಬ್ಯಾಗ್ಗಳಲ್ಲಿ ತರಕಾರಿ ನೀಡಿದರು. ಸರ್ಕಾರ ನಮ್ಮ ಸೇವೆಗೆ ಭದ್ರತೆ ನೀಡುತ್ತಿಲ್ಲ, ಆ ಕಾರಣಕ್ಕೆ ಜೀವನ ನಿರ್ವಹಣೆ ಕಷ್ಟವಾಗಿದೆ. ಅದಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದೇವೆ ಎಂದು ತಮ್ಮ ನೋವನ್ನು ಹೊರ ಹಾಕಿದರು.
ಪದವಿ ಕಾಲೇಜುಗಳಲ್ಲಿ ಶೇ 80 ಅತಿಥಿ ಉಪನ್ಯಾಸಕರೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡುತ್ತಿರುವ ಸಂಬಳ ತೀರಾ ಕಡಿಮೆ ಅದನ್ನು ಸರಿಯಾಗಿ ನೀಡುತ್ತಿಲ್ಲ. ಜೀವನ ನಿರ್ವಹಣೆ ಹೇಗೆ. ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವುದು ಪ್ರತಿಭಟನೆಗೆಗಾಗಿಯಲ್ಲ. ಕೆಲಸವಿಲ್ಲದೆ ಕೆಲವರು ತರಕಾರಿ, ಹಣ್ಣು ಮಾರಾಟ, ತೋಟ ಕಾರ್ವಿುಕರು, ಗಾರೆ, ಪೈಂಟ್ ಕೆಲಸ ಮಾಡುತ್ತಿರುವುದು ವಾಸ್ತುವ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆಯನ್ನು ಅವಲಂಬಿಸಿವೆ. 20 ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಈ ಅನಿಷ್ಠ ಪದ್ಧತಿಯನ್ನು ಮುಕ್ತಾಯಗೊಳಿಸಿ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಸೇವೆ ಕಾಯಂಗೊಳಿಸಿ ಸೇವಾ ವಿಲೀನಗೊಳಿಸುವಾಗ 2009ರ ಜುಲೈ 11ರೊಳಗೆ ಎಂ.ಫಿಲ್ ಪದವಿ ಪಡೆದವರನ್ನು ಪರಿಗಣಿಸಬೇಕು. 10 ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಾರ್ಷಿಕ ಪರೀಕ್ಷಾ ಪದ್ಧತಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ. ಇವರ ಅಂಕಗಳಿಗೂ ಈಗಿನ ಸೆಮಿಸ್ಟರ್ ಪದ್ಧತಿಗೂ ತುಂಬಾ ವ್ಯತ್ಯಾಸವಿದೆ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜು, ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಅತಿಥಿ ಉಪನ್ಯಾಸಕರಿಗೆ ಮನ್ನಣೆ ಸಿಗುತ್ತಿಲ್ಲ. ಅಲ್ಲದೇ, ಸರಿಯಾದ ರೀತಿಯಲ್ಲಿ ವೇತನವೂ ಪಾವತಿಯಾಗುತ್ತಿಲ್ಲ. 26 ವರ್ಷದವರೆಗೂ ಸೇವೆ ಮಾಡಿದವರು ಇದ್ದಾರೆ. ಯಾವುದೇ ಸೇವಾ ಭದ್ರತೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬೇಡಿಕೆ ಈಡೇರಿಕೆಗೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಎನ್.ಯೋಶೋಧರ, ಉಪಾಧ್ಯಕ್ಷೆ ಡಿ.ಎಂ.ಚಂದನ,ಕಾರ್ಯದರ್ಶಿ ವಿ.ಎಸ್.ಮಂಜುನಾಥ್, ಖಜಾಂಚಿ ಡಾ.ಜಗದೀಶ್ ಕರೆನಲ್ಲಿ, ಪದಾಧಿಕಾರಿಗಳಾದ ಡಾ.ನಂದಿನಿ, ಫಿರ್ದೋಸ್, ಸುವರ್ಣಮ್ಮ ,ಮಹಾಂತೇಶ್ ಹಾಗೂ ಇತರ ಉಪನ್ಯಾಸಕರು ಉಪಸ್ಥಿತಿ ಇದ್ದರು.