ಮುಖ್ಯ ಸುದ್ದಿ
ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಪ್ರಕರಣ | ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ | ಸರ್ಕಾರದ ಭರವಸೆ
CHITRADURGA NEWS | 15 FEBRUARY 2024
ಚಿತ್ರದುರ್ಗ: ನಗರದ ತಮಟಕಲ್ಲು ರಸ್ತೆಯಲ್ಲಿ ಮುಖ್ಯ ಕಚೇರಿ ಹೊಂದಿರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸರ್ಕಾರದ ಅನುಮೋದನೆ ಇಲ್ಲದೆಯೇ 362 ಕೋಟಿ ರೂ.ಗಳ ಕಾಮಗಾರಿಗಳಿಗೆ ಮಂಡಳಿ ಅನುಮೋದನೆ ನೀಡಿರುವ ಬಗ್ಗೆ ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪವಾದ ಈ ವಿಚಾರಕ್ಕೆ ಸಂಬಂಧಿಸಿದಂತೆ, ಯೋಜನಾ ಸಚಿವರ ಪರವಾಗಿ ಸಭಾ ನಾಯಕ ಎನ್.ಎಸ್.ಬೋಸರಾಜ್ ಉತ್ತರ ನೀಡಿದರು.
ಇದನ್ನೂ ಓದಿ: ತಾಮ್ರದ ಕೇಬಲ್ ಕಳ್ಳರ ಬಂಧನ | 11 ಲಕ್ಷ ಮೌಲ್ಯದ ತಾಮ್ರದ ತಂತಿ ವಶಕ್ಕೆ
ಸರ್ಕಾರದ ಅನುಮತಿಯಿಲ್ಲದೆ 362 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ, ಉಪಕಾರ್ಯದರ್ಶಿ ಹಾಗೂ ವಿಷಯ ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.
ಇದರೊಟ್ಟಿಗೆ, ಈ ಮೂರು ಜನರನ್ನು ಮಂಡಳಿಯ ಹುದ್ದೆಗಳಿಂದ ಕೈಬಿಟ್ಟು ಮಾತೃ ಇಲಾಖೆಗೆ ಅವರ ಸೇವೆಯನ್ನು ಹಿಂದಿರುಗಿಸಲಾಗಿದೆ. ಇದೆಲ್ಲದರ ಜೊತೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಏನಿದು 362 ಕೋಟಿ ರೂ.ಗಳಿಗೆ ಅನುಮೋದನೆ ಪ್ರಕರಣ:
2022-23ನೇ ಸಾಲಿನಲ್ಲಿ ಸರ್ಕಾರ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಬರುವ 99 ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ 99 ಶಾಸಕರಿಗೆ ತಲಾ 1 ಕೋಟಿ ರೂ. ಹಂಚಿಕೆ ಮಾಡಿ ಕ್ರಿಯಾ ಯೋಜನೆಗಳಿಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ಅಡಿಕೆ ಉತ್ಪಾಧನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲು
ಆದರೆ, ಇಲ್ಲಿನ ಕಾರ್ಯದರ್ಶಿ ಮಂಡಳಿಯ ಹಂತದಲ್ಲೇ ತೀರ್ಮಾನ ಮಾಡಿ, ಸರ್ಕಾರದ ಅನುಮೋದನೆಯೇ ಇಲ್ಲದೆ 362.53 ಕೋಟಿ ರೂ.ಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಈ ವಿಚಾರದ ಬಗ್ಗೆ ಈಗ ಇಲಾಖಾ ವಿಚಾರಣೆಗೆ ಆದೇಶ ಮಾಡಲಾಗಿದೆ.
ಸರ್ಕಾರ ಅನುಮೋದನೆ ನೀಡಿದ 99 ಕೋಟಿ ರೂ.ಗಳ ಬದಲಾಗಿ ಹೆಚ್ಚುವರಿಯಾಗಿ 224 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ತಯಾರಿಸಿದ್ದಕ್ಕೆ ಅನುದಾನ ಬಿಡುಗಡೆ ಆಗಿರಲಿಲ್ಲ. ಅನುದಾನದ ಕೊರತೆ ಕಾರಣಕ್ಕೆ ಪ್ರಾರಂಭವಾಗದ ಒಟ್ಟು 2374 ಕಾಮಗಾರಿಗಳನ್ನು ರದ್ದು ಪಡಿಸಲಾಗಿದೆ.
ಇದನ್ನೂ ಓದಿ: 106 ಜನರಿಗೆ 4.80 ಕೋಟಿ ರೂ. ವಂಚನೆ
ಉಳಿದಂತೆ ಪ್ರಾರಂಭವಾಗಿದ್ದ ಕಾಮಗಾರಿಗಳನ್ನು ಮುಂದುವರೆದ ಕಾಮಗಾರಿಗಳು ಎಂದು ಪರಿಗಣಿಸಿ ಈ ಕೆಲಸಗಳಿಗೆ 150 ಕೋಟಿ ರೂ. ಅನುದಾನವನ್ನು 2024-25ನೇ ಸಾಲಿನ ಬಜೆಟ್‍ನಲ್ಲಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಭಾ ನಾಯಕ ಎನ್.ಎಸ್.ಬೋಸರಾಜ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಇನ್ನೂ, ಬಯಲು ಸೀಮೆ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರ, ಹಣದ ದುರ್ಬಳಕೆ ಕುರಿತು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕೆ.ಎ.ತಿಪ್ಪೇಸ್ವಾಮಿ, ರಾಜೇಂದ್ರ ರಾಜಣ್ಣ, ಎಸ್.ಎಲ್.ಭೋಜೇಗೌಡ ಇತರರು ಯೋಜನಾ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಅವರಿಂದ ಉತ್ತರ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ಸಚಿವರಿಂದ ಉತ್ತರ ಕೊಡಿಸುವುದಾಗಿ ಸರ್ಕಾರದ ಪರವಾಗಿ ಎನ್.ಎಸ್.ಬೋಸರಾಜ್ ತಿಳಿಸಿದ್ದಾರೆ.