Connect with us

    ಬಯಲು ಸೀಮೆ ವಿದ್ಯಾರ್ಥಿಗಳ ಆಶ್ರಯದಾತ ಪಿ.ಆರ್.ತಿಪ್ಪೇಸ್ವಾಮಿ | ನವೀಕೃತ ಸ್ಮಾರಕ ಲೋಕಾರ್ಪಣೆಗೆ ಸಜ್ಜು

    ಮುಖ್ಯ ಸುದ್ದಿ

    ಬಯಲು ಸೀಮೆ ವಿದ್ಯಾರ್ಥಿಗಳ ಆಶ್ರಯದಾತ ಪಿ.ಆರ್.ತಿಪ್ಪೇಸ್ವಾಮಿ | ನವೀಕೃತ ಸ್ಮಾರಕ ಲೋಕಾರ್ಪಣೆಗೆ ಸಜ್ಜು

    CHITRADURGA NEWS | 09 MARCH 2024
    ಚಿತ್ರದುರ್ಗ: ‘ಜಾನಪದ ಜನರ ಜೀವನಾಡಿ, ಅದಕ್ಕಾಗಿ ನೀವು ಅಹರ್ನಿಶಿ ದುಡಿಯುತ್ತಿದ್ದೀರಿ, ನಾನು ಮೆಚ್ಚಿದ್ದು ನಿಮ್ಮ ಈ ಗುಣವನ್ನು, ಇನ್ನು ನಿಮ್ಮ ಚಿತ್ರಕಲಾಶೀಲತೆ ಇದ್ದೇ ಇದೆ.’ ವರಕವಿ ದ.ರಾ. ಬೇಂದ್ರೆ ಅವರು ಈ ಮಾತುಗಳನ್ನು ಹೇಳಿದ್ದು ಚಿತ್ರಕಲಾವಿದ, ಜಾನಪದ ಜಂಗಮ, ಬಯಲು ಸೀಮೆಯ ವಿದ್ಯಾರ್ಥಿಗಳ ಆಶ್ರಯದಾತ ದಿವಂಗತ ಪಿ.ಆರ್. ತಿಪ್ಪೇಸ್ವಾಮಿ ಅವರನ್ನು ಕುರಿತು.

    ಇಂತಹ ಮೇರು ಕಲಾವಿದನ ಜನ್ಮ ಶತಮಾನೋತ್ಸವದ ಪ್ರಯುಕ್ತ ನವೀಕೃತ ಸ್ಮಾರಕ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಮಾರ್ಚ್ 10ರಂದು ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಜತೆಗೆ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: https://chitradurganews.com/on-march-10-kannada-festival-award-ceremony-kt-sivakumar/

    ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಸಚಿವ ಡಿ. ಸುಧಾಕರ್ ಸ್ಮಾರಕ ಲೋಕಾರ್ಪಣೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಡಾ.ಎಚ್‌.ಟಿ. ರುದ್ರಣ್ಣ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪಿ.ಆರ್‌.ಟಿ. ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಬಹುಮಾನ ವಿತರಿಸುವರು.

    ತಿಪ್ಪೇಸ್ವಾಮಿ ಅವರ ನೆರವಿನಿಂದ ನೂರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಮೈಸೂರಿನ ಮಾನಸಗಂಗೋತ್ರಿಯ ಜಾನಪದ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆಗಿದ್ದರು. ಮೈಸೂರಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಹೋಗುತ್ತಿದ್ದ ಚಿತ್ರದುರ್ಗದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ, ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಕೊಡಿಸಲು ತಿಪ್ಪೇಸ್ವಾಮಿ ನೆರವಾಗುತ್ತಿದ್ದರು. ಅವರೊಬ್ಬ ಅಸಾಮಾನ್ಯ ಚಿತ್ರ ಕಲಾವಿದ ಮಾತ್ರವಲ್ಲ, ಮಾನವೀಯತೆಯ ಪ್ರತಿರೂಪ ಎಂದು ನಿಕಟವರ್ತಿಗಳು ಸ್ಮರಿಸುತ್ತಾರೆ.

    ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತು ಸಂಗ್ರಹಾಲಯಕ್ಕೆ ವಸ್ತುಗಳನ್ನು ಸಂಗ್ರಹಿಸಲು ಬೇಂದ್ರೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮೆಚ್ಚುಗೆಯ ಮಾತುಗಳನ್ನು ದಾಖಲಿಸಿದ್ದಾರೆ. ಇದು ತಿಪ್ಪೇಸ್ವಾಮಿ ಅವರ ಕಾರ್ಯಕ್ಷಮತೆಗೆ ಸಣ್ಣ ಉದಾಹರಣೆ ಮಾತ್ರ.

    ಕ್ಲಿಕ್ ಮಾಡಿ ಓದಿ: https://chitradurganews.com/mobile-dialysis-unit-to-start-soon/

    ‘ಇದು ಚಿತ್ರಕೃತಿ ಯಲ್ತೆನೆಗೆ ಪ್ರಕೃತಿಗೆ ಗವಾಕ್ಷಂ, ತೆರೆದಿಹುದು ವರ್ಣ ಶಿಲ್ಪಿಯ ಕುಂಚ….’ ಕುವೆಂಪು ಅವರ ಕದರಡಕೆ ಕೃತಿಯಲ್ಲಿನ ಕವಿಶೈಲದಿಂದ ಕುಂದಾದ್ರಿ ಎಂಬ ಕವನದ ಸಾಲುಗಳಿವು. ಕವನದ ಕೆಳಗೆ ಇದು ತಿಪ್ಪೇಸ್ವಾಮಿ ಅವರ ಚಿತ್ರದಿಂದ ಪ್ರೇರಿತವಾದದ್ದು ಎಂದೇ ಕುವೆಂಪು ನಮೂದಿಸಿದ್ದಾರೆ.

    ರಾಷ್ಟ್ರಕವಿ ಕುವೆಂವು ಅವರ ಸೂಚನೆಯಂತೆ ಕುಪ್ಪಳ್ಳಿಗೆ ಹೋಗಿ ಹತ್ತಾರು ಕಲಾಕೃತಿಗಳನ್ನು ರಚಿಸಿಕೊಂಡು ಬಂದು ಅವರನ್ನು ಸೆಳೆದಿದ್ದರು. ಆದ್ದರಿಂದ ಅವರು ಒಂದು ಕವನವನ್ನೇ ರಚನೆ ಮಾಡಿದ್ದಾರೆ. ರಾಷ್ಟ್ರಕವಿ ಹಾಗೂ ವರಕವಿಯಿಂದ ಮೆಚ್ಚುಗೆಗೆ ಪಾತ್ರವಾದ ತಿಪ್ಪೇಸ್ವಾಮಿ ಬ್ರಹ್ಮಚಾರಿಯಾಗಿ ಚಿತ್ರಕಲೆ, ಜಾನಪದ, ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿದರು. ಅದನ್ನು ಕಂಡೆ ಕವಿ ಎಚ್.ಎಂ. ಪರಮೇಶ ಅವರು ತಮ್ಮ ಕವನವೊಂದರಲ್ಲಿ `ಇಂದು ಆಗುಂಬೆ, ನಾಳೆ ಪೆನಗೊಂಡೆ, ಹಟ್ಟಿಯ ತಿಪ್ಪೇಶ, ಹರತಿಯ ವೀರೇಶ, ಹಂಪಿಯ ವಿರುಪಾಕ್ಷನಲ್ಲೂ ರೂಪಸಿರಿಯನು ಕಂಡೆ, ನಮಗೋ ಮಕ್ಕಳು ಒಂದೋ ಎರಡೋ, ನಿನಗೆ ನೂರಾರು’ ಎಂಬ ಸಾಲುಗಳ ಮೂಲಕ ಅವರ
    ಜೀವನ ಚರಿತ್ರೆಯನ್ನೇ ತೆರದಿಟ್ಟಿದ್ದಾರೆ.

    ತಿಪ್ಪೇಸ್ವಾಮಿ ಕೇವಲ ಕಲಾವಿದ ಮಾತ್ರವಲ್ಲ, ಅವರೊಬ್ಬ ಜನಪದ ಜಂಗಮ, ಮ್ಯೂಸಿಯಂಗಳ ಮಾಂತ್ರಿಕ, ಕಲಾ ವಿಮರ್ಶಕ, ಅಂಕಣಕಾರ, ಎಲೆಮರೆಯ ಕಾಯಿಗಳಂತಿದ್ದ ಅನೇಕ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಲೇಖಕ. ನೂರಾರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ಮಾನವೀಯತೆಯ ಸಾಕಾರಮೂರ್ತಿ ಹೀಗೆ ತಿಪ್ಪೇಸ್ವಾಮಿ ಎಲ್ಲವೂ ಆಗಿದ್ದ ಗಾರುಡಿಗ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ಪಟೇಲ್ ರುದ್ರಪ್ಪ ಹಾಗೂ ಲಕ್ಕಮ್ಮರ ಹಿರಿಯ ಪುತ್ರನಾಗಿ ತಿಪ್ಪೇಸ್ವಾಮಿ 1922ರ ಆಗಸ್ಟ್ 11ರಂದು ಜನಿಸಿದರು. ಜಿಲ್ಲಾ ಮಂಡಳಿ ಸದಸ್ಯರಾಗಿದ್ದ ತಂದೆ ರುದ್ರಪ್ಪ ಅವರಿಗೆ ಪುತ್ರ ವಕೀಲನಾಗಬೇಕೆಂಬ ಬಯಕೆ. ತಂದೆಗೆ ಸಹಜವಾಗಿಯೇ ಮಗ ರಾಜಕೀಯಕ್ಕೆ ಬರಬೇಕೆಂದು ಬಯಕೆ. ಆದರೆ ತಿಪ್ಪಸ್ವಾಮಿ ಅವರು ಚಿಕ್ಕಂದಿನಲ್ಲಿ ಶಾಲೆಯಲ್ಲಿ ಅವರ ಗುರುಗಳು ರಚಿಸಿದ ಉಗಿಬಂಡಿಯ ಚಿತ್ರ ಅವರನ್ನು ಕಲೆಯ ಕಡೆಗೆ ಸೆಳೆಯಿತು.

    ಹರ್ತಿಕೋಟೆಯ ಇವರ ಮನೆಗೆ ಬಂದಿದ್ದ ಎಸ್‌. ನಿಜಲಿಂಗಪ್ಪ ಅವರು, ತಿಪ್ಪೇಸ್ವಾಮಿ ರಚಿಸಿದ್ದ ಗಾಂಧೀಜಿ ಭಾವಚಿತ್ರ ಗಮನಿಸಿ ಮೈಸೂರಿನ ಚಾಮರಾಜೇಂದ್ರಚಿತ್ರಕಲಾ ಶಾಲೆಗೆ ಸೇರುವಂತೆ ಸೂಚಿಸಿದರು. ನಿಜಲಿಂಗಪ್ಪ ಅವರ ಭೇಟಿ ತಿಪ್ಪೇಸ್ವಾಮಿ ಅವರ ಬದುಕಿನ ದಿಕ್ಕನ್ನು ಬದಲಿಸಿತು.

    ನಾಡಿನ ಉದ್ದಗಲಕ್ಕೂ ಸುತ್ತಿ ನೂರಾರು ಜಲವರ್ಣ ಚಿತ್ರಗಳನ್ನು ರಚಿಸಿದರು. ಇಡೀ ದೇಶಾದ್ಯಂತ ನೂರಾರು ಚಿತ್ರಕಲಾ ಪ್ರದರ್ಶನ ನಡೆಸಿದರು. ಇವರ ಕೃತಿಗಳು ದೇಶ, ವಿದೇಶಗಳಲ್ಲಿ ಅನೇಕ ಮ್ಯೂಸಿಯಂಗಳ, ಅನೇಕ ಗಣ್ಯರ ಮನೆಗಳ ಗೋಡೆಯನ್ನು ಅಲಂಕರಿಸಿವೆ. ಯಾವತ್ತೂ ತಮ್ಮ ಕಲಾಕೃತಿಯನ್ನು ಮಾರಾಟ ಮಾಡಲು ತಿಪ್ಪೇಸ್ವಾಮಿ ಒಪ್ಪಲಿಲ್ಲ.

    ಚಿತ್ರಕಲೆಯಲ್ಲಿ ಪದವಿ ಪಡೆದರು ಸಹ ತಂದೆಯ ಆಸೆಯನ್ನು ಈಡೇರಿಸಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಅದರಿಂದ ಪದವಿ ಪಡೆಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು. ಅಲ್ಲಿ ಜೀಶಂಪ, ಕಾರಕೃ ರಂತಹ ಅನೇಕರ ಗೆಳೆತನದ ಪರಿಣಾಮ ಕೈಬರಹ ಪತ್ರಿಕೆಯನ್ನು ಕೆಲ ಕಾಲ ತಂದರು. ಆ ಸಂದರ್ಭದಲ್ಲಿಯೇ ಅವರು ಜನಪದದ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡರು.

    ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ದೇ. ಜವರೇಗೌಡ ಅವರಿಗೆ ಜಾನಪದ ಮ್ಯೂಸಿಯಂ ಒಂದನ್ನು ನಿರ್ಮಿಸುವ ಆಸೆ ಇತ್ತು. ಅದಕ್ಕಾಗಿ ಅವರು ಗುರುತಿಸಿದ್ದು ತಿಪ್ಪೇಸ್ವಾಮಿ ಅವರನ್ನು. ಕ್ಯೂರೇಟರ್ ಆಗಿ ಸೇರಿ ಇಡೀ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮ್ಯೂಸಿಯಂ ರೂಪಿಸಿದ ಕೀರ್ತಿ ಪಡೆದರು. ಅದಕ್ಕಾಗಿ ಅವರು ನಡೆಸಿದ ಕ್ಷೇತ್ರಕಾರ್ಯ ಅತ್ಯಂತ ದೊಡ್ಡದು.

    ಮೈಸೂರು ವಿಶ್ವವಿದ್ಯಾಲಯ ಅಪರೂಪದ ಈ ವಸ್ತು ಸಂಗ್ರಹಾಲಯವನ್ನು ಜೋಪಾನ ಮಾಡುತ್ತಿಲ್ಲ. ಅನೇಕ ಕಲಾಕೃತಿಗಳು ಹಾಳಾಗುತ್ತಿವೆ. ಅಂತಹ ವಸ್ತುಗಳ ಬೆಲೆ ಬಹುಶಃ ವಿಶ್ವವಿದ್ಯಾಲಯದ ಆಡಳಿತಕ್ಕೆ ತಿಳಿಯುತ್ತಿಲ್ಲ.

    ತಿಪ್ಪೇಸ್ವಾಮಿ ಅವರು ರೂಪಿಸಿದ್ದ ಜಾನಪದ ವಸ್ತು ಸಂಗ್ರಹಾಲಯವನ್ನು ಗಮನಿಸಿದ್ದ ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳಕ್ಕೆ ಆಹ್ವಾನಿಸಿದರು. ಅಲ್ಲಿಯೇ ಆರು ವರ್ಷಗಳ ಕಾಲ ತಂಗಿದ್ದು ಮಂಜೂಷಕ್ಕೂ ಒಂದು ರೂಪಕೊಟ್ಟು ಬಂದರು. ಸುತ್ತೂರು ಶ್ರೀಗಳ ಆಶಯದಂತೆ ಸುತ್ತೂರಿನಲ್ಲಿ ಹಾಗೂ ಮುರುಘಾ ಶರಣರ ಆಶಯದಂತೆ ಚಿತ್ರದುರ್ಗದಲ್ಲಿಯೂ ವಸ್ತು ಸಂಗ್ರಹಾಲಯಕ್ಕೆ ಯೋಜನೆ ರೂಪಿಸಿಕೊಟ್ಟರು.

    ನಿಸರ್ಗ ಚಿತ್ರಕಲೆಯಲ್ಲಿ ನಿಸ್ಸೀಮರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಬಂಗಾರಪ್ಪ ಸರ್ಕಾರ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಅಕಾಡೆಮಿಗೆ ಕೊಟ್ಟ ಹಣದಲ್ಲಿ ಕಾರು ಖರೀದಿಗೆ ಹೇಳಿದರು ಸಹ ಅದನ್ನು ನಿರಾಕರಿಸಿ ಕಲೆಗೆ ಸಂಬಂಧಿಸಿದ 47 ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಿದರು.

    ಆ ನಂತರ ಲಲಿತಕಲಾ ಅಕಾಡೆಮಿಯಲ್ಲಿ ಇಷ್ಟು ಪ್ರಮಾಣದಲ್ಲಿ ಕಲೆಗೆ ಸಂಬಂಧಿಸಿದ ಪುಸ್ತಕಗಳು ಹೊರ ಬರಲಿಲ್ಲ. ಬಸ್ಸಿನಲ್ಲಿಯೇ ಸುತ್ತಿ ಅಕಾಡೆಮಿಯ ಕೆಲಸ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಗಳು ಹಾಗೂ ಬಿಡಿ ಬರಹಗಳ ಮೂಲಕ ನೂರಾರು ಲೇಖನಗಳನ್ನು ಬರೆದಿರುವ ತಿಪ್ಪೇಸ್ವಾಮಿ ಅವರು 17 ಕೃತಿಗಳನ್ನು ರಚಿಸಿದ್ದಾರೆ. ಹೋರಾಟಗಾರ ಕೆಂಚಪ್ಪ, ಭಾರತೀಯ ಚಿತ್ರಕಲೆ, ಕಲಾವಿದ ಕಂಡ ಫ್ರಾನ್ಸ್, ಆರ್.ಎಸ್. ನಾಯ್ಡು, ಕಲಾವಿದ ಸೂಫಿ, ಗ್ರಾಮೀಣ ಗೃಹ ವಸ್ತುಗಳು, ಕಲೋಪಾಸಕರು ಪ್ರಮುಖವಾದವು.

    ಮೈಸೂರಿನ ರಮಾವಿಲಾಸ ರಸ್ತೆಯಲ್ಲಿದ್ದ ತಮ್ಮ ಕೋಣೆಯಲ್ಲಿ ನೂರಾರು ಬಡ ವಿದ್ಯಾರ್ಥಿಗಳನ್ನು ಜತೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜಾತಿ ಯನ್ನೇನು ನೋಡಿಲ್ಲ. ನಿಜವಾದ ಜಾತ್ಯತೀತ ವ್ಯಕ್ತಿ ತಿಪ್ಪೇಸ್ವಾಮಿ.

    ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಆಕಾಡೆಮಿ ಪ್ರಶಸ್ತಿ, ವಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ತಿಪ್ಪೇಸ್ವಾಮಿ ಅವರ ಕಾರ್ಯಗಳನ್ನು ಮುಂದುವರೆಸಲು ಅವರ ಅಭಿಮಾನಿಗಳು ಪ್ರತಿಷ್ಠಾನವೊಂದನ್ನು ರಚನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಿದೆ.

    ಶತಮಾನೋತ್ಸವ ರಾಜ್ಯ ಸರ್ಕಾರ ತಿಪ್ಪೇಸ್ವಾಮಿ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ 50 ಲಕ್ಷ ರೂ. ಆರ್ಥಿಕ ಸಹಾಯ ನೀಡಿದೆ. ಅದೇ ಹಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಅವರ ಕಲಾಕೃತಿಗಳ ಮರುಮುದ್ರಣ ಮಾಡಿಸಲಾಗಿದೆ. ಸ್ಮಾರಕ ಅಭಿವೃದ್ಧಿ ಇದೀಗ ಉದ್ಘಾಟನೆಗೆ ಸಿದ್ಧವಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top