ತಾಲೂಕು
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶುಕ್ರವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರೊಟ್ಟಿಗೆ ಅವರ ಪತಿ ರಾಜ್ಯ ಯಾದವ ಸಂಘದ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಕೂಡಾ ಕಾಂಗ್ರೆಸ್ ಸೇರಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಿಕ್ಕಿರಿದು ತುಂಬಿದ್ದ ತಮ್ಮ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೂರ್ಣಿಮಾ ಹಾಗೂ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಇದನ್ನೂ ಓದಿ: ಲೋಕಸಭೆ ಟಿಕೇಟಿಗೆ ನಾನು ಅರ್ಜಿ ಹಾಕಲ್ಲ | ಎಚ್.ಆಂಜನೇಯ
ಈ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಸಲೀಂ ಅಹಮ್ಮದ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಕಾಂಗ್ರೆಸ್ಸಿನಲ್ಲಿ ಇಂದಿನಿಂದ ಮತ್ತೊಂದು ಪಯಣ:
ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿದ ಕೆ.ಪೂರ್ಣಿಮಾ ಶ್ರೀನಿವಾಸ್, ನಾನು ಶಾಸಕಿಯಾಗಿ ವಿಧಾನಸೌಧದ ಮೊಗಸಲೆಯಲ್ಲಿ ಓಡಾಡುವಾಗ ಅನೇಕರು ನನ್ನನ್ನು ಪರಿಚಯ ಮಾಡಿಸುವಾಗ ಕೃಷ್ಣಪ್ಪನವರ ಮಗಳು ಎನ್ನುತ್ತಿದ್ದರು. ಯಾವ ಕೃಷ್ಣಪ್ಪ ಎಂದಾಗ ಕಾಂಗ್ರೆಸ್ಸಿನ ಕೃಷ್ಣಪ್ಪ ಎಂದು ಗುರುತಿಸುತ್ತಿದ್ದರು.
ಇಂದು ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಹಿಂದುಳಿದ ವರ್ಗಗಳಿಗೆ ಸೇರಿದ ಹೆಣ್ಣು ಮಗಳು ನಾನು. ಹಿಂದುಳಿದ ವರ್ಗಗಳಿಗೆ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದರೆ ಪಕ್ಷ ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನನ್ನ ತಂದೆ ಕಾಂಗ್ರೆಸ್ಸಿನಲ್ಲಿದ್ದವರು. ಯಾವುದೋ ಕಾರಣಕ್ಕೆ ಹೊರ ನಡೆದರು. ಈಗ ನಾನು ಕಾಂಗ್ರೆಸ್ ಸೇರಬೇಕು ಎನ್ನುವುದು ಅವರ ಬಯಕೆ ಆಗಿತ್ತೋ ಏನೋ ಗೊತ್ತಿಲ್ಲ. ನಾನು ಮಾತನಾಡುವಾಗ ಅನೇಕರು ನಿಮ್ಮಲ್ಲಿ ಕಾಂಗ್ರೆಸ್ ರಕ್ತ ಇದೆ ಎನ್ನುತ್ತಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ನನ್ನ ತಂದೆಯಿಂದ ನಾನು ಕಲಿತಿದ್ದೇನೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನುಡಿದಂತೆ ನಡೆಯುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇಂದಿನಿಂದ ಕಾಂಗ್ರೆಸ್ಸಿನಲ್ಲಿ ನನ್ನ ಮತ್ತೊಂದು ಪಯಣ ಶುರುವಾಗಿದೆ ಎಂದರು.