ಮುಖ್ಯ ಸುದ್ದಿ
ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ರೈತ ಸಂಘ ಆಕ್ರೋಶ; ಸಂಪುಟದಿಂದ ವಜಾಕ್ಕೆ ಆಗ್ರಹ
ಚಿತ್ರದುರ್ಗ ನ್ಯೂಸ್.ಕಾಂ
₹ 5 ಲಕ್ಷ ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ ಎಂದು ಹೇಳುವ ಮೂಲಕ ರೈತರನ್ನು ನಿಂದಿಸಿ ಅವಹೇಳನಕಾರಿ ಹೇಳಿಕೆ ನೀಡಿರುವ ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜಮಾಯಿಸಿದ ರೈತ ಮುಖಂಡರು ಸಚಿವರ ವಿರುದ್ಧ ಧಿಕ್ಕಾರ ಕೂಗಿ ಶಾಸಕ ಸ್ಥಾನ ಹಾಗೂ ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯಿಸಿದರು.
‘ಪದೇ ಪದೇ ಬರ ಬೀಳಲಿ, ಸಾಲ ಮನ್ನಾ ಆಗುತ್ತದೆ ಎಂದು ರೈತರು ಬಯಸುತ್ತಾರೆ. ನದಿಯಿಂದ ಪುಕ್ಕಟೆ ನೀರು ಸಿಗುತ್ತಿದೆ. ಉಚಿತ ವಿದ್ಯುತ್ ಇದೆ. ಈವರೆಗೆ ಮುಖ್ಯಮಂತ್ರಿ ಆದವರೆಲ್ಲ ಉಚಿತವಾಗಿ ಬೀಜ–ಗೊಬ್ಬರ ನೀಡಿದ್ದಾರೆ. ಸದ್ಯ ರೈತರಿಗೆ ಇರುವುದು ಬರಗಾಲ ಬರಲಿ ಎಂಬ ಬಯಕೆ ಮಾತ್ರ’. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಡ್ಡಿ ಮನ್ನಾ ಮಾಡುವ ಹೇಳಿಕೆ ನೀಡಿದ್ದಾರೆ. ರೈತರು ಇಂಥ ನಿರೀಕ್ಷೆ ಇಟ್ಟುಕೊಳ್ಳಬಾರದು’ ಎಂದು ಹೇಳುವ ಮೂಲಕ ಸಚಿವರು ರೈತರನ್ನು ಕೀಳಾಗಿ ಕಂಡಿದ್ದಾರೆ. ಇದು ಇವರ ಸಂಸ್ಕೃತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹರಿಹರೇಶ್ವರ ಸನ್ನಿಧಿಯಲ್ಲಿ ನಿಧಿಗಳ್ಳರ ದುಷ್ಕೃತ್ಯ; ದೇಗುಲದ ಬಾಗಿಲಿಗೆ ಬೆಂಕಿ
ರಾಜ್ಯದಲ್ಲಿ ಬರದಿಂದ 48.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ಬರ ಪರಿಹಾರ ನೀಡಿಲ್ಲ. ಇದು ಸರ್ಕಾರದ ಅಹಂಕಾರದ ಪರಮಾವಧಿ. ಬರಗಾಲದಿಂದ ಹುಲ್ಲಿನ ಬೆಲೆ ದುಬಾರಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಮೇವಿನ ಕಿಟ್ ವಿತರಿಸಬೇಕು ಎಂದು ಆಗ್ರಹಿಸಿದರು.
5 ವರ್ಷ ಇಡೀ ಸಚಿವ ಸಂಪುಟಕ್ಕೆ ಅಕ್ಕಿ, ರೊಟ್ಟಿ, ಚಟ್ನಿ ಪೂರೈಸುವ ಸಾಮರ್ಥ್ಯ ರೈತರಿಗಿದೆ. ಸಚಿವರು ಹೇಳಿಕೆ ವಾಪಸ್ ಪಡೆಯಬೇಕು. ಯಾವುದೇ ರೈತರು ಸಾಲಮನ್ನಾಕ್ಕಾಗಿ ಬರಗಾಲ ಆಹ್ವಾನಿಸುವುದಿಲ್ಲ. ಯಾವುದೇ ರಾಜ್ಯ ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಗೊಬ್ಬರ ಯಾವುದನ್ನು ಇದುವರೆಗೂ ನೀಡಿಲ್ಲ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪಿಸಿಲ್ಲ. ಇಂತಹ ಸಂದರ್ಭದಲ್ಲಿ ಸಚಿವರು ಆಸಂವಿಧಾನಿಕವಾಗಿ ಪದಬಳಕೆ ಮಾಡಿರುವುದು ನಾಡಿನ ಅನ್ನದಾತರಿಗೆ ಮಾಡಿರುವಂತಹ ಅಪಮಾನ ಎಂದು ಕಿಡಿಕಾರಿದರು.
ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಭೂತಯ್ಯ, ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ ಇತರರು ಇದ್ದರು.