Connect with us

    ಸಂಸದರ ಕಚೇರಿಗೆ ತಲೆಯಿಟ್ಟು ಮಲಗಿದ ರೈತರು | ದಿಲ್ಲಿಯಿಂದ ಪೋನಾಯಿಸಿ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ

    ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ರೈತರು

    ಮುಖ್ಯ ಸುದ್ದಿ

    ಸಂಸದರ ಕಚೇರಿಗೆ ತಲೆಯಿಟ್ಟು ಮಲಗಿದ ರೈತರು | ದಿಲ್ಲಿಯಿಂದ ಪೋನಾಯಿಸಿ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ

    CHITRADURGA NEWS | 07 FEBRUARY 2024

    ಚಿತ್ರದುರ್ಗ: ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಮಹತ್ವದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಣ ಬಿಡುಗಡೆಗೆ ಒತ್ತಾಯಿಸಿ ರೈತರು ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಕಚೇರಿ ಬಳಿ ಅಹೋರಾತ್ರಿ, ಅನಿರ್ಧಿಷ್ಠಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

    ಇಂದು ಮೂರನೇ ದಿನಕ್ಕೆ ಕಾಲಿಟ್ಟುರುವ ಸತ್ಯಾಗ್ರಹದಲ್ಲಿ ಪ್ರತಿ ದಿನ ಒಂದೊಂದು ತಾಲೂಕಿನ ರೈತರು ಬಂದು ಭಾಗವಹಿಸುತ್ತಿದ್ದಾರೆ.

    ಇದನ್ನೂ ಓದಿ: ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ

    ಮೊದಲ ದಿನ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಮೊದಲ ದಿನದ ಧರಣಿಯನ್ನು ಸಂಸದರ ಕಚೇರಿಯ ಮುಂದೆಯೇ ನಡೆಸಿದರು.

    ಸೋಮವಾರ ರಾತ್ರಿ ನಾರಾಯಣಸ್ವಾಮಿ ಅವರ ಕಚೇರಿಯ ಬಾಗಿಲಲ್ಲೇ ರೈತರು ಮಲಗಿದ್ದರು. ಸಂಸದರ ಕಚೇರಿಯ ಮುಂದಿರುವ ಬೆಂಚುಗಳು ಕೂಡಾ ರೈತರಿಗೆ ಮಲಗುವ ತಾಣವಾಗಿದ್ದವು.

    ರೈತರ ಪ್ರತಿಭಟನೆಗಾಗಿ ಅನೇಕರು ನೀಡಿರುವ ಅಕ್ಕಿ, ಬೇಳೆ, ಎಣ್ಣೆ, ಚೊಂಬು, ತರಕಾರಿ, ದಿನಸಿ ಸೇರಿದಂತೆ ಅನೇಕ ವಸ್ತುಗಳು ಸಂಸದರ ಕಚೇರಿಯ ಬಾಗಿಲಲ್ಲೇ ಇದ್ದವು.

    ಭಜನೆ ಮಾಡುವ ಮೂಲಕ ಹೋರಾಟಕ್ಕೆ ಸಾಥ್

    ಭಜನೆ ಮಾಡುವ ಮೂಲಕ ಹೋರಾಟಕ್ಕೆ ಸಾಥ್

    ಕಚೇರಿಯಿಂದ ಸ್ವಲ್ಪ ದೂರದಲ್ಲಿ ಧರಣಿ ನಡೆಸುವಂತೆ ಪೊಲೀಸರು ರೈತರಲ್ಲಿ ಮನವಿ ಮಾಡಿಕೊಂಡರು.

    ಕೇಂದ್ರದ ಮೇಲೆ ಒತ್ತಡ ತರುವ ಉದ್ದೇಶದಿಂದ ಮಾಡುತ್ತಿರುವ ಧರಣಿಯಿಂದಾಗಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಉಳಿದ ಕಚೇರಿಗಳಿಗೆ ತೊಂದರೆಯಾಗುವುದು ಬೇಡ ಎನ್ನುವ ಕಾರಣಕ್ಕೆ ರೈತರು ಮಂಗಳವಾರ ಬೆಳಗ್ಗೆ ಧರಣಿ ಸ್ಥಳವನ್ನು ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರಕ್ಕೆ ಸ್ಥಳಾಂತರ ಮಾಡಿಕೊಂಡರು.

    ಇದನ್ನೂ ಓದಿ: ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿ ತರಬೇತಿ

    ಜಿಲ್ಲಾ ಪಂಚಾಯಿತಿಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಅನೇಕ ವಸ್ತುಗಳನ್ನು ಪೇರಿಸಿಟ್ಟಿದ್ದರು. ಮೆಟ್ಟಿಲು ಹಾಗೂ ಅದರ ಮುಂದೆ ಕಾರು ನಿಲ್ಲುವ ಜಾಗದಲ್ಲಿ ತಾಡಪಾಲು ಹಾಸಿ ಕುಳಿತುಕೊಂಡು ಧರಣಿ ಮುಂದುವರೆಸಿದರು.

    ಈ ನಡುವೆ ಧರಣಿ ನಡೆಯುವ ಜಾಗಕ್ಕೆ ಹುಣಸೆಕಟ್ಟೆಯ ಅಹೋಬಲ ಭಜನಾ ತಂಡ ಆಗಮಿಸಿ ರೈತರೊಂದಿಗೆ ಇಡೀ ದಿನ ಭಜನೆ ಮಾಡುವ ಮೂಲಕ ಹೋರಾಟಕ್ಕೆ ಸಾಥ್ ನೀಡಿದರು.

    ಜಿಲ್ಲೆಯ ಹಿತದೃಷ್ಟಿಯಿಂದ ಹೋರಾಟ ಅನಿವಾರ್ಯ:

    ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಧರಣಿನಿರತ ರೈತರನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ತಲೆದೋರಿದೆ. ಇದಕ್ಕೆ ಶಾಶ್ವತ ಪರಿಹಾರ ಭದ್ರಾಮೇಲ್ದಂಡೆ ಯೋಜನೆ.

    ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಅವರಿಗೆ ಎರಡು ತಿಂಗಳ ಹಿಂದೆಯೇ ಅನುದಾನ ಬಿಡುಗಡೆ ಮಾಡದಿದ್ದರೆ ಸತ್ಯಾಗ್ರಹ ನಡೆಸುವುದಾಗಿ ಮನವಿ ಪತ್ರ ನೀಡಿದ್ದೆವು. ಆದರೂ, ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ.

    ಈ ಕಾರಣಕ್ಕೆ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ನಾವು ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಿದೆ ಎಂದರು.

    ಇದನ್ನೂ ಓದಿ: 28 ರಿಂದ 50 ಸಾವಿರ ವೇತನದ ಉದ್ಯೋಗ

    ಬಜೆಟ್‍ನಲ್ಲಿ ಘೋಷಣೆ ಮಾಡಿದಂತೆ, ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಇಷ್ಟರಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ತುರ್ತಾಗಿ ಕಾಮಗಾರಿ ಮುಗಿಯಬೇಕಿತ್ತು.

    ಕಾಮಗಾರಿಯಲ್ಲಿ ಎಲ್ಲೆಲ್ಲಿ ಸಮಸ್ಯೆ ಇದೆ ಗಮನಿಸಿ ಸರಿಪಡಿಸಬೇಕಾಗಿತ್ತು. ಆದರೆ, ಯಾವುದನ್ನೂ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಮಾಡಲಿಲ್ಲ. ನಮ್ಮ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಅನುದಾನ ಬಿಡುಗಡೆಯಾಗಿ ಜಿಲ್ಲೆಗೆ ನೀರು ಹರಿಯುವವರೆಗೆ ಧರಣಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪುನರುಚ್ಚರಿಸಿದರು.

    ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

    ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

    ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ರಾಮರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ಮಂಜುನಾಥ್, ಸಿದ್ದಪ್ಪ ಹಳಿಯೂರು, ಬಸವರಾಜಪ್ಪ, ನಾಗರಾಜ ರೆಡ್ಡಿ, ಬಿ.ಲೋಕಣ್ಣ, ಮಂಜಣ್ಣ, ಶರಣಪ್ಪ, ಪ್ರಸನ್ನ, ಪರಮಶಿವಪ್ಪ ಮತ್ತಿತರರು ಭಾಗವಹಿಸಿದ್ದರು.

    ಹುಣಸೆಕಟ್ಟೆಯ ಮಾರುತಿ ಧರಣಿನಿರತ ರೈತರಿಗೆ ಪಪ್ಪಾಯಿ ಹಣ್ಣು ನೀಡಿದರು. ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಆವರಣದಲ್ಲೇ ಅನ್ನ, ಸಾಂಬಾರ್, ಪಾಯಸ ಅಡುಗೆ ಮಾಡಿ ಭಾಗವಹಿಸಿದ್ದ ರೈತರಿಗೆ ಬಡಿಸಲಾಯಿತು.

    ದಿಲ್ಲಿಯಿಂದ ಪೋನಾಯಿಸಿದ ಸಂಸದ ಎ.ನಾರಾಯಣಸ್ವಾಮಿ:

    ದೆಹಲಿಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿರುವ ಸಂಸದ ಎ.ನಾರಾಯಣಸ್ವಾಮಿ ರೈತರು ಭದ್ರಾ ಮೇಲ್ದಂಡೆ ಯೋಜನೆ ಕುರಿತು ಧರಣಿ ನಡೆಸುತ್ತಿರುವ ವಿಷಯ ತಿಳಿಯುತ್ತಲೇ ರೈತ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.

    ಮಂಗಳವಾರ ಬೆಳಗ್ಗೆಯೇ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಅವರಿಗೆ ಪೋನ್ ಮಾಡಿ ನಾರಾಯಣಸ್ವಾಮಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 6 ರಂದು ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು

    ಚಿತ್ರದುರ್ಗ ಜಿಲ್ಲೆಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿಯಾಗಿದೆ. ನಿಮ್ಮ ಪರವಾಗಿ ನಾನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧಿವೇಶನ ಇರುವುದರಿಂದ ಬರಲು ಆಗುತ್ತಿಲ್ಲ. ಆದರೆ, ಇಲ್ಲಿ ಏನಾಗಬೇಕು ಅದನ್ನು ಮಾಡುತ್ತೇನೆ.

    ಬಜೆಟ್‍ನಲ್ಲಿ ಘೋಷಣೆಯಾಗಿರುವ ಅನುದಾನ ಬಿಡುಗಡೆ ಸಂಬಂಧ ಕೇಂದ್ರ ಸಚಿವರು ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿ ಅನುದಾನ ಬಿಡುಗಡೆ ಮಾಡಿಸಲು ನಿರಂತರ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಇದೇ ರೀತಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರಿಗೂ ಸಂಸದ ನಾರಾಯಣಸ್ವಾಮಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವ ಮಾಹಿತಿ ಚಿತ್ರದುರ್ಗ ನ್ಯೂಸ್‍ಗೆ ಲಭ್ಯವಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top