ಮುಖ್ಯ ಸುದ್ದಿ
ರೇಖಲಗೆರೆ ಲಂಬಾಣಿಹಟ್ಟಿ ಶಿಕ್ಷಕನಿಗೆ ರಾಜ್ಯಮಟ್ಟದ ಪುರಸ್ಕಾರ | ಪ್ರಯೋಗಶೀಲ ವಿಜ್ಞಾನ ಶಿಕ್ಷಕ ನಾಗಭೂಷಣ್ ಅತ್ಯುತ್ತಮ ಶಿಕ್ಷಕ
ಚಿತ್ರದುರ್ಗ ನ್ಯೂಸ್.ಕಾಂ
ಚಿತ್ರದುರ್ಗ: ಈ ದೇಶದ ಬದಲಾವಣೆ ಸಾಧ್ಯವಿರುವುದು ಶಿಕ್ಷಕರಿಂದ ಮಾತ್ರ. ಓರ್ವ ಶಿಕ್ಷಕ ಮನಸ್ಸು ಮಾಡಿದರೆ ಒಂದಿಡೀ ಊರಿನ ಚಿತ್ರಣವನ್ನೇ ಬದಲಾಯಿಸಬಹುದು. ಮಕ್ಕಳ ಭವಿಷ್ಯದ ಶಿಲ್ಪಿಯೂ ಆತನೇ ಆಗಿರುತ್ತಾನೆ.
ಇದಕ್ಕೆ ನಿದರ್ಶನ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಟಿ.ನಾಗಭೂಷಣ್. ಹೌದು, ಓರ್ವ ವಿಜ್ಞಾನ ಶಿಕ್ಷಕರಾಗಿ ಗ್ರಾಮೀಣ ಭಾಗದಲ್ಲಿ ಪ್ರಯೋಗಾಲಯ ಮಾಡಿ, ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಈ ಕಾರಣಕ್ಕೆ ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆಯಂದು ನೀಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರಕ್ಕೆ ನಾಗಭೂಷಣ್ ಆಯ್ಕೆಯಾಗಿದ್ದಾರೆ.
ಪ್ರಯೋಗಶೀಲ ಶಿಕ್ಷಕ ಎಂದೇ ಹೆಸರಾಗಿರುವ ಕೆ.ಟಿ.ನಾಗಭೂಷಣ್ ಕಳೆದ 16 ವರ್ಷಗಳಿಂದ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದ ನಾಗಭೂಷಣ್, ಮೂಲತಃ ರೈತ ಕುಟುಂಬದವರು. ತಂದೆ ತಿಪ್ಪೇರುದ್ರಪ್ಪ, ತಾಯಿ ಸಾವಿತ್ರಮ್ಮ. 2008 ರಲ್ಲಿ ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾದ ಮೊದಲ ದಿನದಿಂದಲೇ ಶಿಕ್ಷಕ ವೃತ್ತಿಗೆ ಸಮರ್ಪಿತ ಬದುಕು ಕಟ್ಟಿಕೊಂಡಿದ್ದಾರೆ.
ರೇಖಲಗೆರೆ ಲಂಬಾಣಿಹಟ್ಟಿ ಶಾಲೆಗೆ ಸುತ್ತಮುತ್ತಲಿನ ಸುಮಾರು 12 ಹಳ್ಳಿಗಳಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದು, ಸದ್ಯ 156 ಮಕ್ಕಳ ದಾಖಲಾತಿಯಿದೆ. ಇಲ್ಲಿಗೆ ಬರುವ ಶೇ.80 ರಷ್ಟು ಮಕ್ಕಳು ದಲಿತ, ಹಿಂದುಳಿದ ವರ್ಗಕ್ಕೆ ಸೇರಿದವರೇ ಆಗಿದ್ದು, ಅವರಲ್ಲಿ ವಿಜ್ಞಾನ ಕುರಿತು ಆಸಕ್ತಿ ಬೆಳೆಸುವಲ್ಲಿ ನಾಗಭೂಷಣ್ ಪಾತ್ರ ಮಹತ್ತರವಾಗಿದೆ.
ಈ ಪ್ರೌಢಶಾಲೆಯಲ್ಲಿ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯವಿದ್ದಯ, 100 ಪಟ್ಟು ವರ್ತನೆ ಹೊಂದಿರುವ ಎಲೆಕ್ಟ್ರಿಕ್ ಮೈಕ್ರೋ ಸ್ಕೋಪ್, 1 ಲಕ್ಷಕ್ಕಿಂತ ಹೆಚ್ಚು ಭೌತಶಾಸ್ತ್ರ ಉಪಕರಣಗಳು, 500ಕ್ಕಿಂತ ಹೆಚ್ಚು ರಾಸಾಯನಿಕಗಳಿವೆ. ವಿದ್ಯಾರ್ಥಿಗಳೇ ತಯಾರಿಸಿರುವ ಕೆಲ ಉಪಕರಣಗಳೂ ಇಲ್ಲಿವೆ. ಪ್ರೊಜೆಕ್ಟರ್ ಬಳಸಿ ತಂತ್ರಜ್ಞಾನ ಆಧಾರಿತ ಬೋಧನೆ ಮಾಡಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್ ಕೂಡಾ ಇದೆ. ಇದಕ್ಕೆಲ್ಲಾ ಸರ್ಕಾರದ ಅನುದಾನ ಕೆಲ ಪ್ರಮಾಣದಲ್ಲಿದ್ದರೆ, ಶಿಕ್ಷಕ ನಾಗಭೂಷಣ್ ವೈಯಕ್ತಿಕವಾಗಿಯೂ ಭರಿಸಿದ್ದಾರೆ.
ನಾನು ಬಡತನದಲ್ಲಿ ಬೆಳೆದು ಬಂದವನು. ತಂದೆ ತಾಯಿ ರೈತ ಕುಟುಂಬ. ಬಿಎಸ್ಸಿ ನಂತರ ಎಂಎಸ್ಸಿಗೆ ಹೋಗಲು ಸಾಕಷ್ಟು ಜನ ಸಲಹೆ ನೀಡಿದರೂ, ಬಿ.ಇಡಿ ಸೇರಿದೆ. ಅಲ್ಲಿದ್ದ ಶಿಕ್ಷಕ ಇ.ಶ್ರೀನಿವಾಸ ರೆಡ್ಡಿ ಅವರ ಪ್ರಭಾವ ಸಾಕಷ್ಟು ನನ್ನ ಮೇಲೆ ಆಗಿರುವ ಕಾರಣಕ್ಕೆ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ನಾಗಭೂಷಣ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಗ್ರಾಮೀಣ ಮಕ್ಕಳು ಪ್ರತಿಭಾವಂತರು. ಆದರೆ, ಅವರಿಗೆ ಮಾರ್ಗದರ್ಶನದ ಕೊರತೆಯಿದೆ. ಅದನ್ನು ಗುರುತಿಸಿ ಮಾರ್ಗದರ್ಶನ ಹಾಗೂ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲೇ ಹೈಟೆಕ್ ಮಾದರಿಯ ಪ್ರಯೋಗಾಲಯ ಮಾಡಬೇಕು ಎನ್ನುವುದು ನನ್ನ ಕ
ನಸು. ಸುತ್ತಮುತ್ತಲಿನ ಶಾಲೆಯ ಮಕ್ಕಳು ಇಲ್ಲಿಗೆ ಬಂದು ಕಲಿಯಬೇಕು. ಇದಕ್ಕಾಗಿ 5-6 ಲಕ್ಷದ ಅವಶ್ಯಕತೆಯಿದೆ. ರೇಖಲಗೆರೆ ಲಂಬಾಣಿಹಟ್ಟಿ ಗ್ರಾಮಸ್ಥರ ಸಹಕಾರ ಚೆನ್ನಾಗಿದೆ. ಆದರೆ, ಆರ್ಥಿಕ ನೆರವು ಬೇಕು ಎನ್ನುವುದು ನಾಗಭೂಷಣ್ ಹೆಬ್ಬಯಕೆಯಾಗಿದೆ.
ನನಗೆ ಶಾಲಾ ಹಂತದಲ್ಲಿ ಏನೆಲ್ಲಾ ಕೊರತೆ ಇತ್ತು. ಅದ
ನ್ನೆಲ್ಲಾ ಈಗಿನ ಮಕ್ಕಳಿಗೆ ಒದಗಿಸಬೇಕು. ಸಾಕಷ್ಟು ತಂತ್ರಜ್ಞಾನ ಇದೆ. ಎಲ್ಲವನ್ನೂ ಬಳಕೆ ಮಾಡಿಕೊಂಡು ನಗರ ಪ್ರದೇ
ಶದ ಮಕ್ಕಳಂತೆಯೇ ಗ್ರಾಮೀಣ ಭಾಗದ ಮಕ್ಕಳನ್ನು ತಯಾರು ಮಾಡಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ.
| ಕೆ.ಟಿ.ನಾಗಭೂಷಣ್, ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ.
ವಿದ್ಯಾರ್ಥಿಗಳ ಮನೆ ಮುಂದೆ ಪಾಠ ಮಾಡಿದ್ದ ಶಿಕ್ಷಕ:
ಕೋವಿಡ್ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಸಾಕಷ್ಟು ಸಂಕಷ್ಟ ಅನುಭವಿಸಿದರು. ಆನ್‍ಲೈನ್ ತರಗತಿಗಳು ನಡೆದವು. ಆದರೆ, ವಿಜ್ಞಾನ ಕಲಿಕೆ ಅಷ್ಟು ಸಲೀಸಾಗಿರಲಿಲ್ಲ. ಇದಕ್ಕಾಗಿ 8-10 ಸಾವಿರ ವೆಚ್ಚ ಮಾಡಿಕೊಂಡು ಶಿಕ್ಷಕ ನಾಗಭೂಷಣ್ ವಿಜ್ಞಾನದ ಕಿಟ್ ತಯಾರಿಸಿಕೊಂಡು, ಶಾಲಾ ವ್ಯಾಪ್ತಿಯ 10-12 ಹಳ್ಳಿಗಳಲ್ಲಿರು
ವ ಮಕ್ಕಳ ಮನೆ ಮುಂದೆ ಬೈಕ್ ನಿಲ್ಲಿಸಿಕೊಂಡು ಪಾಠ ಮಾಡಿ, ಪ್ರಯೋಗಗಳನ್ನು ಮಾಡಿ ಕಲಿಸಲಾಗಿದೆ. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು. ನಾನು ಶಿಕ್ಷಕನಾಗಿ ರೇಖಲಗೆರೆ ಲಂಬಾಣಿಹಟ್ಟಿ ಶಾಲೆಗೆ ಬಂದ ನಂತರ ಇಲ್ಲಿನ ಹಲ
ವು ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗಿದ್ದಾರೆ. ಉದ್ಯೋಗದಲ್ಲಿದ್ದಾರೆ. ಎಂಬಿಬಿಎಸ್, ಇಂಜಿನಿಯರಿಂಗ್ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ನಾಗಭೂಷಣ್ ವಿವರಿಸುತ್ತಾರೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)