ಮುಖ್ಯ ಸುದ್ದಿ
ಚಿತ್ರದುರ್ಗ ಜಿಲ್ಲೆಯಾದ್ಯಂತ ಮಧ್ಯಾಹ್ನದಿಂದ ರಾತ್ರಿವರೆಗೆ ಕೈಕೊಟ್ಟ ಕರೆಂಟ್, ಪರದಾಡಿದ ಜನತೆ
ಚಿತ್ರದುರ್ಗ ನ್ಯೂಸ್:
ಗುರುವಾರ ಮಧ್ಯಾಹ್ನ 2.30ಕ್ಕೆ ದಿಢೀರ್ ಕೈಕೊಟ್ಟ ವಿದ್ಯುತ್ ರಾತ್ರಿ 8.30ರವರೆಗೆ ಬರಲೇ ಇಲ್ಲ. ಸತತ 6 ತಾಸು ಅಂದರೆ ಇದರಿಂದ ಅರ್ಧ ದಿನ ಜನ ಪರದಾಡುವಂತಾಯಿತು.
ವಿಪರೀತ ಬಿಸಿಲಿದ್ದರಿಂದ ಮಧ್ಯಾಹ್ನ ವಿದ್ಯುತ್ ತೆಗೆದಾಗಲೇ ಅಸಮಧಾನಗೊಂಡ ಜನ, ಕ್ರಮೇಣ ಮೊಬೈಲ್, ಯುಪಿಎಸ್, ಬ್ಯಾಟರಿ ಸೇರಿದಂತೆ ಎಲ್ಲವುಗಳ ಚಾರ್ಜ್ ಖಾಲಿಯಾಗುತ್ತಿದ್ದಂತೆ ಕೆಇಬಿ ಕಚೇರಿ, ಅಧಿಕಾರಿಗಳಿಗೆ ಪೋನಾಯಿಸಲು ಆರಂಭಿಸಿದರು.
ಬೇಸಿಗೆಗೆ ಮುನ್ನವೇ ವಿದ್ಯುತ್ ಕಣ್ಣಾ ಮುಚ್ಚಾಲೆ ಆರಂಭಿಸಿದರೆ ಹೇಗೆ, ಕರೆಂಟ್ ಯಾವಾಗ ಬರುತ್ತದೆ ಎಂದು ಎಲ್ಲ ಕಡೆಗಳಿಂದ ಪ್ರಶ್ನೆಗಳ ಸುರಿಮಳೆ ಬಂದಿದೆ ಎಂದು ಬೆಸ್ಕಾಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಸಂಜೆ ಹೊತ್ತಿಗೆ ಅಡುಗೆ ಕೆಲಸ ಆರಂಭಿಸುವ ಮಹಿಳೆಯರು ರಾತ್ರಿ ಮಿಕ್ಸಿಗೆ ಹಾಕಿಕೊಳ್ಳಲು ಪರದಾಡಿದರೆ, ಮನೆಯ ಮೇಲಿನ ಟ್ಯಾಂಕರ್ ನೀರು ಖಾಲಿಯಾಗಿ ತೊಟ್ಟಿ, ಸಂಪಿನಿಂದ ನೀರೆತ್ತಿ ತರುವ ಸಾಹಸ ಮಾಡುವಾಗ ಬೆಸ್ಕಾಂ ಅಧಿಕಾರಿಗಳು, ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಯಾವುದೇ ಮುನ್ಸೂಚನೆ ಇಲ್ಲದೆ, ದಿಢೀರ್ ವಿದ್ಯುತ್ ಕಡಿತಗೊಳಿಸಿದ್ದರಿಂದ ಜನತೆ ಅಕ್ಷರಶಃ ಪರದಾಡುವಂತಾಯಿತು. ಇನ್ನೂ ವಿದ್ಯಾರ್ಥಿಗಳು ಸಂಜೆಯ ನಂತರ ಓದಲು ವಿದ್ಯುತ್ ಅಭಾವ ತಲೆದೂರಿತು, ಸಂಜೆ ಹೊತ್ತಿಗೆ ವ್ಯಪಾರ ವಹಿವಾಟು ನಡೆಸುವ ಅಂಗಡಿ, ಶೋ ರೂಂ, ಹೋಟೆಲ್, ಬೀದಿ ಬದಿ ವ್ಯಾಪಾರಸ್ಥರು ಕೂಡಾ ಬೇಗ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮುನ್ಸೂಚನೆ ಇಲ್ಲದೆ ವಿದ್ಯುತ್ ಕಡಿತಗೊಳಿಸಿದ ಕುರಿತು ಮಾಹಿತಿ ನೀಡಿದ ಬೆಸ್ಕಾಂ ಅಧಿಕಾರಿಗಳು, ನಮಗೂ ಸರಿಯಾದ ಮಾಹಿತಿ ಇರಲಿಲ್ಲ. ವಿದ್ಯುತ್ ಉತ್ಪಾಧನೆಯಲ್ಲಿ ಸಮಸ್ಯೆಯಾಗಿದೆ. ಈ ಕಾರಣಕ್ಕೆ ರಾಜ್ಯಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ. ಹಂತ ಹಂತವಾಗಿ ಒಂದೊಂದೇ ಪ್ರದೇಶದಲ್ಲಿ ಚಾರ್ಜ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)