ಮುಖ್ಯ ಸುದ್ದಿ
ಬೈದವರನ್ನು ಬಂಧು ಎನ್ನಿ…ಯಾರನ್ನೂ ಏನೂ ಅನ್ನಬೇಡಿ | ಗೋವಿಂದ ಎಂ.ಕಾರಜೋಳ
CHITRADURGA NEWS | 30 MARCH 2024
ಚಿತ್ರದುರ್ಗ: ಹೊಯಿದವರೆನ್ನ ಹೊರೆದವರೆಂಬೆ, ಬೈದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದರೆಂಬೆ,
ಜರಿದವರೆನ್ನ ಜನ್ಮ ಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ
ಕೂಡಲ ಸಂಗಮದೇವಾ..’
ಹೀಗೆ…ಬಸವಣ್ಣನ ವಚನದ ಮೂಲಕ ಎಲ್ಲದಕ್ಕೂ ಉತ್ತರ ನೀಡಿದ್ದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ.
ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ ಅವರಿಗೆ ಕೆಲವರು ‘ಗೋ ಬ್ಯಾಕ್…‘ ಪ್ಲೇ ಕಾರ್ಡ್ ಪ್ರದರ್ಶಿಸಿದರು. ಇದರಿಂದ ಕೊಂಚವೂ ವಿಚಲಿತರಾಗದೇ ತಮ್ಮದೇ ಶೈಲಿಯಲ್ಲಿ ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ನೀಡಿದರು. ಜತೆಗೆ ಪಕ್ಷದ ಕಚೇರಿಯಲ್ಲೂ ಸಹ ಮಾತನಾಡಿ,‘ನಮ್ಮ ವಿರುದ್ಧ ಪ್ರತಿಭಟನೆ, ಹಗುರವಾಗಿ ಮಾತನಾಡುವವರಿಗೆ ಪ್ರತಿಕ್ರಿಯಿಸಲು ಹೋಗಬೇಡಿ, ನೀವು ದೊಡ್ಡವರು ಎನ್ನಿ ಸಾಕು. ಬಸವಣ್ಣ ಹೇಳಿದಂತೆ ಬೈದವರನ್ನು ಬಂಧು ಎನ್ನಿ, ನಿಂದಿಸಿದವರು ತಾಯ್ತಂದೆಗಳು, ಹೊಡೆದವರನ್ನು ಹಡೆದವರೆನ್ನಿ. ಯಾರನ್ನೂ ಏನೂ ಅನ್ನಬೇಡಿ’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
‘ಪ್ರತಿಭಟನೆ ನಡೆಸುವವರು, ಪಕ್ಷದ ವಿರುದ್ಧ ಧಿಕ್ಕಾರ ಕೂಗುವವರು, ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆಯುವವರಿಗೆ ತಲೆಕೆಡಿಸಿಕೊಳ್ಳಬಾರದು. ನಮ್ಮದು ಶಿಸ್ತಿನ ಪಕ್ಷ. ದೇಶದ 23 ರಾಜ್ಯಗಳಲ್ಲಿ ನಮ್ಮ ಪಕ್ಷದ ಸರ್ಕಾರ ಇದೆ. ಹಾಗಾಗಿ ಯಾರೂ ಶಿಸ್ತು ಉಲ್ಲಂಘಿಸಬಾರದು’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪ್ರೊ.ಲಿಂಗಪ್ಪ, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಳೆಕಾಯಿ ರಾಮದಾಸ್, ಸಂಪತ್‍ಕುಮಾರ್, ಜಿ.ಟಿ.ಸುರೇಶ್, ಭಾರ್ಗವಿ ದ್ರಾವಿಡ್ ಮತ್ತಿತರರಿದ್ದರು.