ಮುಖ್ಯ ಸುದ್ದಿ
ಅದಿರು ಲಾರಿಗಳ ನೊಂದಣಿ ರದ್ದುಗೊಳಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

CHITRADURGA NEWS | 03 JULY 2024
ಚಿತ್ರದುರ್ಗ: ಕಡ್ಲೆಗುದ್ದು ಹಾಗೂ ಸಾಸಲು ರಸ್ತೆಗಳಲ್ಲಿ ಅದಿರು ತುಂಬಿರುವ ಬೃಹತ್ ವಾಹನಗಳು ಸಂಚಾರ ಮಾಡುತ್ತಿವೆ. ಈ ವಾಹನಗಳಿಂದ ರಸ್ತೆ ಹಾಳಾಗುವುದರ ಜೊತೆ ಪರಿಸರ ಮಾಲಿನ್ಯವು ಉಂಟಾಗುತ್ತಿದೆ. ಈ ವಾಹನಗಳ ಪೈಕಿ 20 ವರ್ಷ ಪೂರೈಸಿದ ವಾಹನಗಳ ನೊಂದಣಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರದ್ದು ಪಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹಳೆಯ ಗೂಡ್ಸ್ ವಾಹನ, ಟ್ಯಾಕ್ಟರ್, ಟ್ರ್ಯಾಲಿ, ಲಾರಿ, ಟಿಪ್ಪರ್‌ಗಳ ಹಿಂಬದಿಯಲ್ಲಿ ರಿಫ್ಲೆಕ್ಟರ್‌ಗಳು ಇಲ್ಲದಿರುವುದು ಕಂಡುಬರುತ್ತದೆ. ಇದರಿಂದ ಸಾಕಷ್ಟು ಅಪಘಾತ ಹಾಗೂ ಸಾವು ನೋವು ಸಂಭವಿಸುತ್ತಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲೆಕ್ಟರ್ ಅಳವಡಿಕೆಗೆ ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.
ಕ್ಲಿಕ್ ಮಾಡಿ ಓದಿ: ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಗ್ರಾಮೀಣ ಭಾಗದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಒಟ್ಟು 33,000 ಎಲ್.ಎಂ.ವಿಗಳು ನೊಂದಣಿಯಾಗಿವೆ. ಇದರಲ್ಲಿ ಬಹುತೇಕ ಟ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳು ಆಗಿವೆ. ಜಿಲ್ಲೆಯಲ್ಲಿ 247 ಅದಿರು ಸಾಗಣೆ ಲಾರಿಗಳಿವೆ. ಇವುಗಳಲ್ಲಿ ನೊಂದಣಿ ಅವಧಿ ಮುಕ್ತಾಯಗೊಂಡ ಹಾಗೂ ಸಕ್ಷಮವಾಗಿ ಇರುವ ಲಾರಿಗಳ ನೊಂದಣಿ ನವೀಕರಿಸದೇ, ರದ್ದು ಮಾಡುವುದಾಗಿ ಪ್ರಾದೇಶಿಕ ಸಾರಿಗೆ ಭರತ್.ಎಂ.ಕಾಳೆಸಿಂಗೆ ಹೇಳಿದರು.
ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕು ಎಂದರು.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಾತಿ ವಿಳಂಬ | ಎಬಿವಿಪಿ ಜಿಲ್ಲಾ ಘಟಕ ಪ್ರತಿಭಟನೆ
ಜಿಲ್ಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು. ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾರ್ಕಿಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಇದ್ದರು.
