ತಾಲೂಕು
ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಪರಿಹಾರ ನೀಡದಿದ್ದರೆ ಹೋರಾಟ | ಶಾಸಕ ಡಾ.ಎಂ.ಚಂದ್ರಪ್ಪ
ಚಿತ್ರದುರ್ಗ ನ್ಯೂಸ್: ಕಳೆದ 20 ವರ್ಷಗಳಲ್ಲೇ ಅತೀ ಭೀಕರ ಅನ್ನಿಸುವಂತಹ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಳಲ್ಕೆರೆ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಬೆಳೆ ನಷ್ಟ ಪರಿಗಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಕೆಲಸ ಕೊಡಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಆಗ್ರಹಿಸಿದ್ದಾರೆ.
ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಇರುವ ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ರೈತರ ಜತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತಿ ಗೊಬ್ಬರ ಹಾಕಿ, ಕಳೆ ತೆಗೆದು, ಎಡೆಕುಂಟೆ ಹೊಡೆಸಿ ಮಳೆಗಾಗಿ ಕಾಯುತ್ತಿದ್ದರು. ಆದರೆ, ಸಕಾಲಕ್ಕೆ ಮಳೆಯಾಗದೆ ಬೆಳೆಯೆಲ್ಲಾ ಬಾಡಿ ಹೋಗಿದೆ. ರೈತರಿಗೆ ಅನ್ಯಾಯವಾಗಿದ್ದನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಒಂದೆಡೆ ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗುತ್ತಿದ್ದರೆ ಮತ್ತೊಂದೆಡೆ, ಗುಣಮಟ್ಟದ ವಿದ್ಯುತ್ ಇಲ್ಲದೆ ತೋಟಗಳು ಕಳೆಗುಂದಿವೆ ಎಂದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕಂಡು ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಅಸಮಧಾನ ಹೊರ ಹಾಕುತ್ತಿದ್ದಾರೆ. ದಿನಕ್ಕೆ 5 ಗಂಟೆಗಳಷ್ಟಾದರೂ ವಿದ್ಯುತ್ ಕೊಡಿ ಎಂದು ಕೇಳುತ್ತಿದ್ದಾರೆ ಎಂದರು.
ಈ ಹಿಂದೆ ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ಬರಗಾಲವಿತ್ತು. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಈಗಲೂ ಬರಗಾಲ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಖಾಯಂ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಎಲ್ಲ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ನಮ್ಮ ಸರ್ಕಾರವಿದ್ದಾಗ ಬೇರೆ ಬೇರೆ ಕಡೆಯಿಂದ ವಿದ್ಯುತ್ ತಂದು ರೈತರಿಗೆ ದಿನಕ್ಕೆ ಏಳು ಗಂಟೆಗಳ ಕಾಲ ಪೂರೈಸಿದ್ದೇನೆ. ಎರಡು ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಅಸಹ್ಯವಾಗಿ ಮಾತನಾಡುತ್ತಿದ್ದಾರೆ. ವ್ಯತಿರಿಕ್ತ ಪರಿಣಾಮಕ್ಕೆ ಅವಕಾಶ ನೀಡದೆ ರೈತರ ನೆರವಿಗೆ ಧಾವಿಸಲಿ ಎಂದು ಮನವಿ ಮಾಡಿದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)