ಮುಖ್ಯ ಸುದ್ದಿ
ಇಲ್ಲಿ ನಂದೇನು ಹೊಲ ಇಲ್ಲ, ನನಗೆ ಬೆಳೆವಿಮೆ ಬರಲ್ಲ: ರೈತರ ಹಿತವಷ್ಟೇ ಮುಖ್ಯ | ಡಿಸಿ ದಿವ್ಯಪ್ರಭು
ಚಿತ್ರದುರ್ಗ ನ್ಯೂಸ್.ಕಾಂ: ಇಲ್ಲಿ ನನ್ನದೇನು ಹೊಲ ಇಲ್ಲಪ್ಪ, ನನ್ನ ಖಾತೆಗೆ ಬೆಳೆ ವಿಮೆ ಬರುವುದಿಲ್ಲ. ಜಿಲ್ಲೆಯ ರೈತರ ಹಿತ ಕಾಯುವುದಷ್ಟೇ ನನ್ನ ಕೆಲಸ.
ಹೀಗೆ ನಿಷ್ಠುರವಾಗಿ ವಿಮಾ ಕಂಪನಿ ಅಧಿಕಾರಿಗಳಿಗೆ ಹೇಳುವ ಮೂಲಕ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಬರಪೀಡಿತ ಜಿಲ್ಲೆಯ ರೈತರಿಗೆ ನೆರವಾಗುವಂತೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರು, ಕೃಷಿ, ತೋಟಗಾರಿಕೆ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆ ಹಾನಿಯಾಗಿರುವುದು, ರೈತರು ಹಾಕಿದ ಬಂಡವಾಳವೂ ಸಿಗದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನೀವು ಎಲ್ಲ ಕಡೆ ಪ್ರವಾಸ ಮಾಡಿ ರೈತರ ಜತೆ ಮಾತಾಡಿ, ಕೃಷಿ ಭೂಮಿಗಳಿಗೆ ಭೇಟಿ ನೀಡಿದ್ದೀರಾ ಎಂದು ವಿಮಾ ಕಂಪನಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ವೇಳೆ ಬೆಳವಿಮೆ ಕಟ್ಟಿಸಿಕೊಂಡಿರುವ ಕಂಪನಿಯವರು, ಶೇಂಗಾ ಬೆಳೆ ಹಾನಿಯಾಗಿದೆ. ಈರುಳ್ಳಿ ಕುರಿತು ಇನ್ನೂ ಮಾಹಿತಿ ಪಡೆದುಕೊಂಡಿಲ್ಲ ಎಂದು ಹೇಳಿದರು.
ಈ ವೇಳೆ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಯಾವ ಬೆಳೆಯೂ ಬಂದಿಲ್ಲ. ಈ ಬಗ್ಗೆ ಸ್ವತಃ ಕೃಷಿ ಸಚಿವರೇ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ವಿಜ್ಞಾನಿಗಳು ಕೂಡಾ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಬೆಳೆಗಳ ಈಗಿನ ಸ್ಥಿತಿ ಅರಿತು ವರದಿ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ 83,606 ರೈತರು ನೊಂದಣಿ ಮಾಡಿಕೊಡಿದ್ದಾರೆ. ಒಟ್ಟು 11.92 ಕೋಟಿ ರೂಪಾಯಿ ಪ್ರೀಮಿಯಂ ಮೊತ್ತ ಪಾವತಿಸಲಾಗಿದೆ. ಶೇ.80 ರಷ್ಟು ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಮಧ್ಯಂತರ ಪರಿಹಾರವಾಗಿ ಶೇ.25 ರಷ್ಟನ್ನು ಬಿಡುಗಡೆ ಮಾಡಬೇಕಿದೆ ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ರೈತರ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾ, ಬರ ಪರಿಸ್ಥಿತಿಯನ್ನು ವಿಮಾ ಕಂಪನಿಗಳು ಹಾಗೂ ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ತೋರಿದ ಆಸಕ್ತಿಯನ್ನು ಮೆಚ್ಚಿಕೊಂಡ ರೈತರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.