ಮುಖ್ಯ ಸುದ್ದಿ
ಭಗೀರಥ ಶ್ರೀಗಳ ರಜತ ಮಹೋತ್ಸವಕ್ಕೆ ಕ್ಷಣಗಣನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ
CHITRADURGA NEWS | 09 FEBRUARY 2024
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸಗರ ಚಕ್ರವರ್ತಿ ಮಹಾಮಂಟಪದ ಹೆಸರಿನ ಬೃಹತ್ ವೇದಿಕೆ ಸಿದ್ಧವಾಗಿದ್ದು, ಶ್ರೀಮಠ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ.
ಬ್ರಹ್ಮ ವಿದ್ಯಾನಗರದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಗುರುಪೀಠಕ್ಕೆ 13 ನೇ ಜಗದ್ಗುರುಗಳಾಗಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರಿಗೆ 2000 ನೇ ಸಾಲಿನ ಫೆ. 10 ರಂದು ಪಟ್ಟಾಭಿಷೇಕ ನಡೆಯಿತು. ಲೇಪಾಕ್ಷಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದು, ಕೃಷಿ, ಧಾರ್ಮಿಕ, ಆಧ್ಯಾತ್ಮಿಕ, ಶಿಕ್ಷಣದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಫೆ. 9ರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಿ. ಸುಧಾಕರ್, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ, ಭೈರತಿ ಸುರೇಶ್, ಮಧು ಬಂಗಾರಪ್ಪ, ಆರ್.ಬಿ. ತಿಮ್ಮಾಪುರ, ಎನ್.ಎಸ್. ಬೋಸರಾಜು, ನಾಗೇಂದ್ರ, ಶಾಸಕರಾದ ಪುಟ್ಟರಂಗಶೆಟ್ಟಿ, ಬಿ.ಜಿ. ಗೋವಿಂದಪ್ಪ ಸೇರಿ ಹಲವು ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಸಾಲುಮರದ ತಿಮ್ಮಕ್ಕ, ಡಾ.ಕೆ.ಎಸ್. ರವೀಂದ್ರನಾಥ್, ಕುಂಸಿ ಚಂದ್ರಪ್ಪ, ವಿಜಯ್ ಕುಮಾರ್ ತೋರ್ಗಲ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಸವಿತ ಮಹತೋ ಅವರಿಗೆ ‘ಭಗೀರಥರತ್ನ ಪ್ರಶಸ್ತಿ’ ನೀಡಲಾಗುವುದು. ಮಧ್ಯಾಹ್ನ 2ಕ್ಕೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ಫೆ.11ರಂದು ಶ್ರೀ ಗಂಗಾಂಬಿಕಾ ಸಮುದಾಯ ಭವನ ಉದ್ಘಾಟನೆ | ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ
ಫೆ. 10ಕ್ಕೆ ಶ್ರೀಮಠದ ಆವರಣದಲ್ಲಿ ಹೋಮ, ಹವನ, ಪೀಠಾರೋಹಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರೋಗ್ಯ ಉಚಿತ ತಪಾಸಣಾ ಶಿಬಿರ, ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕುರಿತ ಪ್ರದರ್ಶನ ಹಾಗೂ ಫೆ. 8ರಿಂದ 10ರವರೆಗೆ ನಿರಂತರ ದಾಸೋಹ ನಡೆಯಲಿದೆ. ಭಗೀರಥ ದೇವಾಲಯ, ಆಂಜನೇಯ ಸೇರಿದಂತೆ ಮಠದ ಆವರಣದಲ್ಲಿನ ಎಲ್ಲಾ ದೇವಾಲಯಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಾವಿರಾರು ಜನ ಸೇರುವ ನಿರೀಕ್ಷೆಯಿದೆ. ಈಗಾಗಲೇ ಐದು ಸಾವಿರ ಜನ ಆಗಮಿಸಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ರೈತರ ಖಾತೆಗೆ ಬೆಳೆವಿಮೆ | ವಿಮಾ ಕಂಪನಿಗೆ 21 ದಿನ ಡೆಡ್‌ಲೈನ್
ಶ್ರೀಮಠದ ಆವರಣದಲ್ಲಿ 60 ಅಡಿ ಎತ್ತರದ ಭಗೀರಥ ಏಕಶಿಲಾ ಮೂರ್ತಿ ನಿರ್ಮಾಣ, ಕಲ್ಲಿನ ಭುವನೇಶ್ವರಿ ದೇವಿ ರಥ ನಿರ್ಮಾಣ, ಉತ್ತರ ಭಾರತದ ಗಂಗಾನದಿ ದಡದಲ್ಲಿ ಭಗೀರಥ ಮೂರ್ತಿ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮೀಸಲಾತಿಗಾಗಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲು ಸಿದ್ಧತೆ ನಡೆಸಲಾಗಿದೆ.