ಮುಖ್ಯ ಸುದ್ದಿ
ಬೆಳೆವಿಮೆ ತಾರತಮ್ಯ ಸರಿಪಡಿಸಿ | ರೈತರ ಖಾತೆಗೆ ಹಣ ಜಮೆ ಮಾಡಿ

CHITRADURGA NEWS | 22 MAY 2024
ಚಿತ್ರದುರ್ಗ: ಬರ ಪರಿಹಾರ ಮತ್ತು ಬೆಳೆ ವಿಮೆ ತಾರತಮ್ಯ ಸರಿಪಡಿಸಿ ರೈತರ ಖಾತೆಗೆ ಹಣ ಜಮೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಚಿತ್ರದುರ್ಗ ಜಿಲ್ಲಾ ಸಮಿತಿ ಬುಧವಾರ ಪ್ರತಿಭಟನೆ ನಡೆಸಿತು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ರೈತರು, ಸರ್ಕಾರವು ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ ಬರ ಪರಿಹಾರ ಹಣದ ವಿಚಾರದಲ್ಲಿ ಮಾತ್ರ ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಬರ ಪರಿಹಾರದ ಸಹಾಯವಾಣಿ ಕೇಂದ್ರ ಸ್ಥಾಪನೆ ಮಾಡಿದೆ. ತಾಲ್ಲೂಕಿನ ಅಧಿಕಾರಿಗಳನ್ನು ಕೇಳಿದರೆ ನಿಮ್ಮ ದಾಖಲೆ ನೀಡಿದರೆ ಪರಿಶೀಲಿಸುತ್ತೇವೆಂದು ಹೇಳುತ್ತಾರೆ. ಬಳಿಕ ನಿಮ್ಮದು ಜಮೀನು ನೀರಾವರಿ ಹೀಗಾಗೀ ನಿಮಗೆ ಪರಿಹಾರ ಹಣ ಬರುವುದಿಲ್ಲ, ಖುಷ್ಕಿ ಜಮೀನಿಗೆ ಮಾತ್ರ ಬರುತ್ತದೆಂದು ಹೇಳುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೂ ಬಂತು ಡ್ರೋನ್ | ಔಷಧ ಸಿಂಪರಣೆಗೆ ರೈತರಿಗೆ ನೆರವು
ರೈತರು ನಮ್ಮ ಜಮೀನಿನಲ್ಲಿ ಬೋರ್ವೆಲ್ ಇಲ್ಲ, ಕರೆಂಟ್ ಕಂಬಗಳು ಇಲ್ಲ ನೀವೆ ಬಂದು ನೋಡಿ ಎಂದು ಹೇಳಿದರೆ ಸರ್ಕಾರಕ್ಕೆ ಹೋಗಿ ಕೇಳಿ. ನಾವು ಏನು ಮಾಡಲು ಬರುವುದಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಹಳ್ಳಿಯಲ್ಲಿ 10ರಿಂದ 15 ಜನ ರೈತರ ಖಾತೆಗೆ ಹಣ ಜಮೆಯಾಗಿದೆ. ಕೆಲವರಿಗೆ ಫೋನ್ ಮೇಸೆಜ್ ಬಂದಿದೆ. ಆದರೆ ಖಾತೆಗೆ ಹಣ ಜಮೆ ಆಗಿಲ್ಲ. ಈ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ಕಂಟೇನರ್ ಲಾರಿಯಲ್ಲಿ ಎತ್ತುಗಳ ಸಾಗಾಣೆ | ವಿಎಚ್ಪಿ, ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ
ಗೋಮಾಳ, ಅರಣ್ಯ ಭೂಮಿ, ಬಗರ್ ಹುಕುಂ, ಹುಲ್ಲು ಬನ್ನಿ ಖರಾಬ್, ಸೇಂದಿ ವನ, ಸಾಗುವಳಿ ಮಾಡಿರುವಂತಹ ರೈತರಿಗೂ ಹಾಗೂ ಪೌತಿ ಖಾತೆ ಹೊಂದಿರುವಂತಹ ರೈತ ಕುಟುಂಬದವರಿಗೂ, ಎಲ್ಲಾ ವರ್ಗದ (ಒಣ ಬೇಸಾಯ ಮತ್ತು ನೀರಾವರಿ ಮಾಡಿರುವ) ರೈತರಿಗೂ ಬರ ಬಂದಿದೆ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ತೊಗರಿ, ರಾಗಿ, ಸಜ್ಜೆ, ಹತ್ತಿ ಹೂವಿನ ಸಸಿಗಳು ಸೂರ್ಯಕಾಂತಿ ಮತ್ತು ತೋಟಗಾರಿಕೆ ಬೆಳೆಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ, ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ, ಕಾರ್ಯಾಧ್ಯಕ್ಷ ಓಂಕಾರಪ್ಪ, ತಾಲ್ಲೂಕು ಅಧ್ಯಕ್ಷರಾದ ಶಿವಮೂರ್ತಿ, ನಾಗರಾಜ್, ಶ್ರೀಧರ ರೆಡ್ಡಿ, ಸಿದ್ದೇಶ್ ಯಾದವ್, ಸತ್ಯಪ್ಪ, ಮೋಹನ್, ಕುಮಾರ್ ಇದ್ದರು.
