ಮುಖ್ಯ ಸುದ್ದಿ
ಕಾರ್ಮಿಕ ಇಲಾಖೆಯ ವಿರುದ್ಧ ಬೀದಿಗಿಳಿದ ಕಟ್ಟಡ ಕಾರ್ಮಿಕರು
CHITRADURGA NEWS | 09 JULY 2024
ಚಿತ್ರದುರ್ಗ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕ ಇಲಾಖೆಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಅಖಿಲ ಭಾರತ ವೀರಶೈವ ಮಹಾಸಭಾ | ಡಿ.ಕೆ.ಆರ್.ಗ್ರೂಪ್ ಮಂಜುನಾಥ್ ಆಯ್ಕೆ
ಶೈಕ್ಷಣಿಕ ಧನ ಸಹಾಯಕ್ಕಾಗಿ ಹೊರಡಿಸಲಾಗಿದ್ದ 2023 ರ ಅಧಿಸೂಚನೆಯನ್ನು ರದ್ದುಪಡಿಸಿ 2021 ರ ಅಧಿಸೂಚನೆಯನ್ವಯ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ದವಾಗಿ ಸಿಗುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಇದುವರೆಗೂ ಹನ್ನೆರಡು ಹೋರಾಟಗಳನ್ನು ನಡೆಸಲಾಗಿದೆ. ಶೈಕ್ಷಣಿಕ ಧನ ಸಹಾಯ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾಗಿರುವ ಸಾವಿರಾರು ಅರ್ಜಿಗಳು ಕೊಳೆಯುತ್ತಿವೆ ಎಂದರು.
ಪಿಂಚಣಿ ಕೂಡ ನಿಂತಿರುವುದರಿಂದ ಕಾರ್ಮಿಕರ ಕುಟುಂಬ ಸಂಕಷ್ಟ ಎದುರಿಸುತ್ತಿದೆ. ಕಾರ್ಮಿಕರು ಕೇಳದಿದ್ದರು ಅವರಿಗೆ ನೀಡಲು ಖರೀಧಿಸಿರುವ ಲ್ಯಾಪ್‍ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‍ಗಳಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಕೋಟ್ಯಾಂತರ ರೂ.ಗಳ ಅವ್ಯವಹಾರವೆಸಗಿದೆ ಎಂದು ಪ್ರತಿಭಟನಾನಿರತರು ಕಾರ್ಮಿಕ ಇಲಾಖೆ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಕೆ ಅವಧಿಯನ್ನು 2024 ಆ.31 ರವರೆಗೆ ವಿಸ್ತರಿಸಬೇಕು. ಪಿಂಚಣಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೆಯಾಗಬೇಕು. ಪಿಂಚಣಿ ಮುಂದುವರಿಕೆಗಾಗಿ ಸಲ್ಲಿಸಲಾಗಿರುವ ಅರ್ಜಿಗಳು ಕೂಡ ವಿಲೆ ಆಗಬೇಕು. ವರ್ಷದ ಹನ್ನೆರಡು ತಿಂಗಳು ಸರಿಯಾಗಿ ಪಿಂಚಣಿ ನೀಡಬೇಕು. ಈ ಸಂಬಂಧ ಹಲವು ದೂರುಗಳನ್ನು ನೀಡಿದ್ದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿ.ಐ.ಟಿ.ಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಒತ್ತಾಯಿಸಿದರು.
ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಜಾತಿಗೆ ಸೀಮಿತವಲ್ಲ | ಭಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್
ಪ್ರತಿಭಟನೆಯಲ್ಲಿ ಬಿ.ಸಿ.ನಾಗರಾಜಚಾರಿ, ಮಂಜುನಾಥ್, ಅಬ್ದುಲ್ಲಾ, ಸಣ್ಣಮ್ಮ, ರಾಘವೇಂದ್ರ, ರಶೀದ್, ಇಸ್ಮಾಯಿಲ್‍ಸಾಬ್, ದ್ರಾಕ್ಷಾಯಣಮ್ಮ, ಸೈಯದ್ ಮುಜ್ಜು, ಮಲ್ಲಿಕಾರ್ಜುನ್, ಚಂದ್ರಮ್ಮ, ಉಮೇಶ್, ಕೆ.ಎನ್.ನಾಗರಾಜ್ ಸೇರಿದಂತೆ ಇತರರು ಇದ್ದರು.