ಮುಖ್ಯ ಸುದ್ದಿ
ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ | ಕೆ.ಸಿ. ವೀರೇಂದ್ರ ಪಪ್ಪಿ

CHITRADURGA NEWS | 07 MARCH 2024
ಚಿತ್ರದುರ್ಗ: ಬೇಸಿಗೆ ಕಾಲವಿರುವುದರಿಂದ, ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗಾಗಿ ಮೀಸಲಿಟ್ಟ ಅನುದಾನದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸೂಚನೆ ನೀಡಿದರು.
ಕುಡಿಯುವ ನೀರು ಪೂರೈಕೆ ಕುರಿತಂತೆ ನಗರಸಭೆಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಬುಧವಾರ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಏನಿತ್ತು
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಚಿತ್ರದುರ್ಗ ನಗರಕ್ಕೆ ಶಾಂತಿ ಸಾಗರ, ವಿ.ವಿ.ಸಾಗರ, ಬೋರ್‍ವೆಲ್‍ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಶಾಸಕ ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ನಗರದ ವಾರ್ಡ್ ನಂ. 01 ರಿಂದ 35 ರಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ವಾಲ್ವ್‍ಮ್ಯಾನ್‍ಗಳು ತಮಗೆ ವಹಿಸಿದ ವಾರ್ಡ್‍ಗಳಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಮುರುಘಾ ಮಠ, ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಶಿವಯೋಗಿ ಕಳಸದ್
ನೀರಿನ ಅಭಾವವಿರುವ ಕಡೆಗಳಲ್ಲಿ ಬೋರ್‍ವೆಲ್‍ಗಳನ್ನು ಕೊರೆಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆಯ ಆರ್.ಓ. ಪ್ಲಾಂಟ್‍ಗಳನ್ನು ಚಾಲನೆಗೆ ಕೊಟ್ಟು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. 15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗಾಗಿ ಮೀಸಲಿಟ್ಟ ಅನುದಾನದ ಕಾಮಗಾರಿಗಳನ್ನು ತುರ್ತಾಗಿ ಅನುಷ್ಟಾನಗೊಳಿಸಬೇಕು. ಇ-ಆಸ್ತಿಗಳನ್ನು ಹಾಗೂ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗೆ ಸಾರ್ವಜನಿಕರಿಗೆ ತಲುಪುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ಚಿಕ್ಕಜಾಜೂರು ರೈಲ್ವೆ ಜಂಕ್ಷನ್‍ನಲ್ಲಿ ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆ
ನಗರ ವ್ಯಾಪ್ತಿಯ ಒಳಚರಂಡಿ ಯೋಜನೆ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಚರ್ಚಿಸಿ, ಪೂರ್ಣ ಯೋಜನೆಯ ಕುರಿತು ಮತ್ತೊಮ್ಮೆ ಪಿ.ಪಿ.ಟಿ ಮತ್ತು ಸ್ಥಳಗಳ ವೀಕ್ಷಣೆ ಮಾಡಿ, ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕ್ರಮ ವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತೆ ರೇಣುಕಾ.ಎಂ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜು, ಸೇರಿದಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
