ಮುಖ್ಯ ಸುದ್ದಿ
ದಲಿತ ವಿದ್ಯಾರ್ಥಿ ಪರಿಷತ್‍ನಿಂದ ಸ್ಫರ್ಧಾತ್ಮಕ ಪರೀಕ್ಷೆ | 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ

ಚಿತ್ರದುರ್ಗ ನ್ಯೂಸ್:
ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್‍ನಿಂದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. 150ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ನೊಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಡಾ.ಸೌಮ್ಯಾ ಮಂಜುನಾಥ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದ ಜೊತೆಗೆ ಹೋರಾಟವನ್ನೂ ಮಾಡಿಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಇಂದಿಗೂ ಸಮಾಜದಲ್ಲಿ ಹೆಣ್ಣು ಮಕ್ಕಳು, ಶೋಷಿತರ ಮೇಲೆ ದೌರ್ಜನ್ಯಗಳು ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆ ಅಂಬೇಡ್ಕರ್ ಮಾದರಿಯಲ್ಲಿ ನಡೆಯಬೇಕಿದೆ ಎಂದರು.
ಅಂಬೇಡ್ಕರ್ ಸಾಮಾಜಿಕ ಕ್ರಾಂತಿಯ ಹರಿಕಾರ, ಕಾನೂನು ಹೋರಾಟಗಾರ, ಕಾನೂನು ಹಕ್ಕುಗಳನ್ನು ಮಹಿಳೆಯರಿಗೆ ತೋರಿಸಿಕೊಟ್ಟವರು. ಸಂವಿಧಾನ ಶಿಲ್ಪಿಯಾಗಿರುವ ಅವರು ಆರ್ಥಿಕ ತಜ್ಞರಾಗಿ ಗುರುತಿಸಿಕೊಂಡಿರುವುದು ಇಡೀ ಭಾರತಕ್ಕೆ ಹೆಮ್ಮೆ. ಅವರನ್ನು ಪುಸ್ತಕದಲ್ಲಿ ಓದುವ ಮತ್ತೊಬ್ಬರಿಗೆ ಓದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ಡಾ.ಸುರೇಂದ್ರನಾಥ್ ಮಾತನಾಡಿ, ನಮ್ಮ ಬದುಕಿನಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ಅಳವಡಿಸಿಕೊಂಡು ನಡೆದರೆ ಅಪಾಯವೇ ಇಲ್ಲದಂತೆ ಜೀವಿಸಬಹುದು. ಅಂಬೇಡ್ಕರರ ಜೀವನ, ಶಿಕ್ಷಣ, ಹೋರಾಟವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.
ಬಾಬಾ ಸಾಹೇಬರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನದಲ್ಲಿ ಎಲ್ಲಾ ಸಮುದಾಯದ ಜನರಿಗೆ ಭದ್ರತೆಯನ್ನು ಕೊಟ್ಟು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸ್ಮರಿಸಿದರು.
ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ಎಲ್.ನಾಗರಾಜ್, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಶಾಂತಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪ್ರಕಾಶ್, ಸಾವಿತ್ರಿ ಬಾಪುಲೆ ಪ್ರಶಸ್ತಿ ಪುರಸ್ಕøತೆ ಯಶೋಧಮ್ಮ, ಬಸವರಾಜ್, ರವಿಕಿರಣ್, ನಂದೀಶ್, ಮಲ್ಲಿಕಾರ್ಜುನ ಇತರರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
