ಮುಖ್ಯ ಸುದ್ದಿ
ರಾತ್ರೋ ರಾತ್ರಿ ಬದಲಾದ TP | ದುರ್ಗದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿತ್ರದುರ್ಗ ನ್ಯೂಸ್.ಕಾಂ: ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ ಎರಡು ಸಲ ಪರಿಷ್ಕರಣೆಯಾಗಿದೆ.
ಮೊದಲ ಪ್ರವಾಸ ಕಾರ್ಯಕ್ರಮದಲ್ಲಿ ಬೆಳಗ್ಗೆ 11ಕ್ಕೆ ಚಿತ್ರದುರ್ಗಕ್ಕೆ ಆಗಮಿಸಿ ಖಾಸಗಿ ಕಾರ್ಯಕ್ರಮ (ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೋಡೆಮನೆ ಆರತಕ್ಷತೆ) ದಲ್ಲಿ ಭಾಗವಹಿಸಿ ಆನಂತರ ಹಿರಿಯೂರು ತಾಲೂಕಿನ ಬಬ್ಬೂರಿಗೆ ತೆರಳಿ ಅಲ್ಲಿ ಕೃಷಿ ವಿಜ್ಞಾನ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿತ್ತು.
ಆದರೆ, ಪರಿಷ್ಕರಣೆಯಾಗಿರುವ ಪ್ರವಾಸ ಕಾರ್ಯಕ್ರಮದಲ್ಲಿ ಕಲುಷಿತ ನೀರು ಕುಡಿದು ಸಾವು ನೋವು ಅನುಭವಿಸಿರುವ ಕವಾಡಿಗರಹಟ್ಟಿಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಕಾರ್ಯಕ್ರಮ ಸೇರಿದೆ.
ಮುಖ್ಯಮಂತ್ರಿಗಳ ಮೊದಲ ಪ್ರವಾಸ ಪಟ್ಟಿ ನೋಡಿದ ದುರ್ಗದ ಹೋರಾಟಗಾರರು ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿಗಳು ಕವಾಡಿಗರಹಟ್ಟಿಗರ ಭೇಟಿ ನೀಡುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಕವಾಡಿಗರಹಟ್ಟಿಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು.
ಗುರುವಾರ ಬೆಳಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ನಡೆಸಿದ ಸುದ್ದಿಗೋಷ್ಠಿಯಲ್ಲೂ ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕೆ ಸ್ಪಷ್ಟೀಕರಣ ಎನ್ನುವಂತೆ ಬಿ.ಎನ್.ಚಂದ್ರಪ್ಪ, ಈಗಾಗಲೇ ಅನೇಕ ಸಚಿವರು ಬಂದು ಹೋಗಿದ್ದಾರೆ. ಸರ್ಕಾರ ಪರಿಹಾರವನ್ನೂ ನೀಡಿದೆ. ಅಭಿವೃದ್ಧಿಗೆ ಅನದಾನ ಮಂಜೂರು ಮಾಡಿದೆ. ಮುಖ್ಯಮಂತ್ರಿಗಳಿಗೆ ಕಾರ್ಯದೊತ್ತಡದ ಕಾರಣಕ್ಕೆ ಬರಲು ಆಗಿಲ್ಲ ಎಂದಿದ್ದರು.
ಇದೆಲ್ಲಾ ಮುಗಿದ ನಂತರ ಸಂಜೆ ಮಾಜಿ ಸಚಿವ ಎಚ್.ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕವಾಡಿಗರಹಟ್ಟಿಗೆ ಭೇಟಿ ನೀಡುತ್ತಾರೆ ಎಂದು ಪ್ರಕಟಣೆ ನೀಡಿದರು.
ರಾತ್ರಿ 10 ಗಂಟೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಷ್ಜೃತ ಪ್ರವಾಸ ಪಟ್ಟಿ ಕೂಡಾ ಕೈ ಸೇರುವ ಮೂಲಕ ಸಿದ್ದರಾಮಯ್ಯ ಕವಾಡಿಗರಹಟ್ಟಿಗೆ ಭೇಟಿ ನೀಡುವ ಕಾರ್ಯಕ್ರಮ ಅಧಿಕೃತವಾಗಿದೆ.
ಒಟ್ಟಾರೆ, ಒತ್ತಡ ಹಾಗೂ ಟೀಕೆ ಎದುರಿಸಬೇಕಾಗುತ್ತದೆ ಎನ್ನುವ ಮುನ್ನೆಚ್ಚರಿಕೆ ವಹಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಕವಾಡಿಗರಹಟ್ಟಿಗೆ ಕರೆತರುವಲ್ಲಿ ಜಿಲ್ಲೆಯ ಮುಖಂಡರು ಯಶಸ್ವಿಯಾಗಿದ್ದಾರೆ.