ತಾಲೂಕು
ಬಹಳ ದಿನಗಳಿಂದ ಗಾಳ ಹಾಕಿದ್ದೆ ಎಂದ ಡಿಕೆಶಿ | ಪೂರ್ಣಿಮಾ-ಶ್ರೀನಿವಾಸ್‍ಗೆ ಅನ್ಯಾಯ ಆಗಲು ಬಿಡಲ್ಲ ಎಂದ ಸಿಎಂ
ಚಿತ್ರದುರ್ಗ ನ್ಯೂಸ್.ಕಾಂ: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಿರಿಯೂರಿನ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ, ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು, ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು. ಈಗ ಕಾಂಗ್ರೆಸ್ಸಿಗೆ ಬಂದಿದ್ದಾರೆ. ಅವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದ್ದರೆ, ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟಿದೆ ಎಂದರು.
ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಇನ್ನೂ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಾಂಗ್ರೆಸ್‍ಗೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಹಳ ದಿನಗಳಿಂದ ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್‍ಗೆ ಗಾಳ ಹಾಕುತ್ತಿದ್ದೆ. ಇಂದು ಅಂತಿಮವಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದರು.
ನಮ್ಮದೇ ಆದ ತಪ್ಪಿನಿಂದ ಹಿಂದೆ ಎ.ಕೃಷ್ಣಪ್ಪ ಕಾಂಗ್ರೆಸ್ ತೊರೆದಿದ್ದರು. ಈಗ ಅವರ ಪುತ್ರಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಕಳಚಿದ್ದ ಕೊಂಡಿ ಮತ್ತೆ ಬೆಸೆದುಕೊಂಡಿದೆ ಎಂದು ಹೇಳಿದರು.
ಪಕ್ಷದ ಎಲ್ಲ ಮುಖಂಡರ ಜೊತೆಗೆ ಚರ್ಚೆ ನಡೆಸಿ, ಪೂರ್ಣಿಮಾ, ಶ್ರೀನಿವಾಸ್ ಹಾಗೂ ಅವರ ಜತೆಗೆ 4-5 ಸಾವಿರ ಜನರನ್ನು ಇಂದು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ ಎಂದರು.