ಮುಖ್ಯ ಸುದ್ದಿ
ಚಿತ್ರಹಳ್ಳಿ ಪೊಲೀಸರ ಭರ್ಜರಿ ಭೇಟೆ | ಆನೆದಂತ, ರಕ್ತಚಂದನ, ಶ್ರೀಗಂಧ ಜಪ್ತಿ
ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಆನೆದಂತ, ಶ್ರೀಗಂಧ, ರಕ್ತಚಂದನ ಸೇರಿದಂತೆ ವನ್ಯಜೀವಿ ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಕೊಳಾಳು ಭಾಗದಲ್ಲಿ ಶ್ರೀಗಂಧ ಕಳುವು ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಭರ್ಜರಿ ಬೇಟೆಯೇ ಸಿಕ್ಕಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ತರೀಕೆರೆ ಮೂಲದ ಚಂದ್ರಶೇಖರ್ ಹಾಗೂ ತಮಿಳುನಾಡು ಮೂಲದ ಕಲೀಲ್ ಎಂಬುವವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಜಿಲ್ಲಾ ನ್ಯಾಯಾಧೀಶರಾಗಿದ್ದ ಬಿ.ಎಸ್.ರೇಖಾ ವರ್ಗಾವಣೆ
ಖಚಿತ ಮಾಹಿತಿ ಆಧರಿಸಿ ಬುಧವಾರ ರಾತ್ರಿ 2 ಗಂಟೆ ವೇಳೆಗೆ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣವಾಗಿದ್ದ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ಎಲ್ಲ ಕಾರ್ಯಾಚರಣೆ ಮುಗಿಸಿ, ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಆನೆಯ ದಂತ, ಶ್ರೀಗಂಧದ ತುಂಡುಗಳು, ರಕ್ತಚಂದನ ಸೇರಿದಂತೆ ವನ್ಯಜೀವಿಗಳಿಗೆ ಸಂಬಂಧಿಸಿದ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಕಟ್ಟಿಗೆ ಮಾರಾಟಗಾರ ಎಂದು ಮನೆ ಲೀಸ್ ಪಡೆದಿದ್ದ:
ಹಿರಿಯೂರು ತಾಲೂಕು ಹೂವಿನಹೊಳೆ ಗ್ರಾಮದ ನಾರಾಯಣಪ್ಪ ಎಂಬುವವರು ಇತ್ತೀಚೆಗೆ ಬಬ್ಬೂರು ಹೊರವಲಯದಲ್ಲಿ ನಿರ್ಮಿಸಿದ್ದ ಮನೆಯನ್ನು ತರೀಕೆರೆ ಮೂಲದ ಚಂದ್ರಶೇಖರ್ ಆರ್.ಕೆ.ಪವರ್ ಜೆನ್‍ಗೆ ಕಟ್ಟಿಗೆ ಮಾರಾಟ ಮಾಡುವ ಕೆಲಸ ಮಾಡುವುದಾಗಿ ಹೇಳಿ ಲೀಸ್‍ಗೆ ಪಡೆದಿದ್ದ.
ಚಂದ್ರಶೇಖರ್ ಪತ್ನಿ ಹಾಗೂ ಮಗ ಮನೆಯಲ್ಲಿ ವಾಸವಾಗಿದ್ದರು. ಕಡೂರು, ಬೀರೂರು, ತರೀಕೆರೆ ಭಾಗದಿಂದ ಸೌಧ, ಮರ, ಮುಟ್ಟುಗಳನ್ನು ಪವರ್‍ಜೆನ್‍ಗೆ ತಂದು ಮಾರಾಟ ಮಾಡುವುದಾಗಿ ಅಕ್ಕಪಕ್ಕದವರಿಗೆ ನಂಬಿಸಿದ್ದರು. ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ಆಗಾಗ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಇಂದು ಸಂಜೆ ಹೊತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್ ಮೀನಾ ಸಮಗ್ರ ಮಾಹಿತಿಯನ್ನು ಸುದ್ದಿಗೋಷ್ಠಿ ಮೂಲಕ ನೀಡುವ ಸಾಧ್ಯತೆ ಇದೆ.