ಮುಖ್ಯ ಸುದ್ದಿ
ಚಿತ್ರದುರ್ಗ ಬಿಜೆಪಿಗೆ ಬಂಡಾಯದ ಬಿಸಿ | ಪ್ರತ್ಯೇಕ ಸಭೆ ನಡೆಸಿದ ಅಸಮಧಾನಿತರು
CHITRADURGA NEWS | 08 FEBRUARY 2024
ಚಿತ್ರದುರ್ಗ: ಜಿಲ್ಲಾ ಬಿಜೆಪಿ ಘಟಕಕ್ಕೆ ನೂತನ ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯ ಬೆನ್ನಲ್ಲೆ ಅಸಮಧಾನ ಹೊರಬಿದ್ದಿದೆ.
ಕಳೆದ ಅವಧಿಯಲ್ಲಿ ಬಿಜೆಪಿಯಲ್ಲಿ ಜಿಲ್ಲೆ, ತಾಲೂಕಿನ ಪ್ರಮುಖ ಜವಾಬ್ದಾರಿಗಳಲ್ಲಿದ್ದ ಕಾರ್ಯಕರ್ತರೇ ಅಸಮಧಾನ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ನಡೆಸಿ ಅಸಮಧಾನ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.
ಇದನ್ನೂ ಓದಿ: ತೀವ್ರ ಸ್ವರೂಪಕ್ಕೆ ಬಯಲುಸೀಮೆ ಭದ್ರಾ ಹೋರಾಟ
ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ನೂತನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಆಯ್ಕೆಯಾದ ನಂತರ ಮೊದಲ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದರೆ. ಇದೇ ವೇಳೆಗೆ ನಗರದ ಹೊರವಲಯದ ಓಜಸ್ ಹೋಟೆಲ್‍ನಲ್ಲಿ ಅಸಮಧಾನಿತ ಬಿಜೆಪಿ ಕಾರ್ಯಕರ್ತರು, ಮುಖಂಡರ ಪ್ರತ್ಯೇಕ ಸಭೆ ನಡೆಯುತ್ತಿತ್ತು.
ಸ್ಥಳಕ್ಕೆ ಮಾಧ್ಯಮಗಳು ತೆರಳುತ್ತಿದ್ದಂತೆ ಕೆಲವರು, ಇದು ನಮ್ಮ ಮನೆಯ ಸಮಸ್ಯೆ ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದರೆ, ಮತ್ತೆ ಕೆಲವರು ಘೋಷಣೆಗಳನ್ನು ಕೂಗಿದರು.
ಮೋದಿ ಮತ್ತೊಮ್ಮೆ, ಬಿಜೆಪಿಗೆ ಜೈ ಎಂದು ಘೋಷಣೆ ಕೂಗಿದರು. ಮೋದಿ ಮತ್ತೊಮ್ಮೆ ಎಂದು ಬರೆದಿರುವ ಫ್ಲೆಕಾರ್ಡ್ ಪ್ರದರ್ಶಿಸುವ ಮೂಲಕ ನಾವು ಬಿಜೆಪಿ ವಿರುದ್ಧ ಇಲ್ಲ ಎನ್ನುವುದನ್ನು ಒತ್ತಿ ಒತ್ತಿ ಹೇಳುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ಜ್ಯೋತಿರಾಜ್ ಗೆ ಜಾನಪದ ಲೋಕ ಪ್ರಶಸ್ತಿಯ ಗರಿ
ಆನಂತರ, ಎರಡನೇ ಅವಧಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮುರುಳಿ ಹಠಾವೋ ಬಿಜೆಪಿ ಬಚಾವೋ, ಪ್ರಧಾನ ಕಾರ್ಯದರ್ಶಿಗಳಾಗಿರುವ ಸಂಪತ್ ಹಠಾವೋ ಬಿಜೆಪಿ ಬಚಾವೋ, ಜಿ.ಟಿ.ಸುರೇಶ್ ಹಠಾವೋ ಬಿಜೆಪಿ ಬಚಾವೋ ಎಂದು ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬೇಕಾಗಿತ್ತು. ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಗೂ ಬೇರೆಯವರಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿದರು.
ಅಸಮಧಾನಿತರ ಪ್ರತ್ಯೇಕ ಸಭೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಬರಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಅವರು ಬರಲಿಲ್ಲ. ವಿಶೇಷ ಕಾರ್ಯಕಾರಿಣಿ ಸಭೆಗಾಗಿ ಆಗಮಿಸಿದ್ದ ಜಿಲ್ಲಾ ಸಹ ಪ್ರಭಾರಿ ಪ್ರೇಮಕುಮಾರ್ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ | ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ
ಸುಮಾರು ಒಂದು ಗಂಟೆ ಅಸಮಧಾನಿತರ ಜೊತೆಗೆ ಸಭೆ ನಡೆಸಿದ ಪ್ರೇಮಕುಮಾರ್, ಇದು ನಮ್ಮ ಮನೆಯೊಳಗಿನ ಸಮಸ್ಯೆ. ಅವರ ಸಮಸ್ಯೆಗಳನ್ನು ಹೇಳಿದ್ದಾರೆ. ಇದನ್ನು ಪಕ್ಷದ ವರಿಷ್ಠರಿಗೆ ತಲುಪಿಸಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸ್ಥಳದಲ್ಲಿದ್ದ ಕೆಲ ಕಾರ್ಯಕರ್ತರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಜಿಲ್ಲೆಯಲ್ಲಿ ಪಕ್ಷ ಗೆಲ್ಲಬೇಕು. ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿ, ಸರ್ವಾಧಿಕಾರ ಮಾಡುವವರನ್ನು ಚುನಾವಣೆಗಿಂತ ಮೊದಲೇ ಬದಲಾಯಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸಭೆಯಲ್ಲಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾಗಿದ್ದ ಡಾ.ಮಂಜುನಾಥ್, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ಮಲ್ಲಿಕಾರ್ಜುನ್, ಅಶೋಕ್ ನಂದಿ ನಾಗರಾಜ್, ರತ್ನಮ್ಮ, ರೂಪಾ ಸುರೇಶ್, ಎನ್.ಆರ್.ಜಗದೀಶ್, ಸಾ.ಚ.ಮಂಜುನಾಥ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ಇನ್ನೂ ಬಿಜೆಪಿಯ ಎರಡೂ ಸಭೆಗಳಿಗೆ ಒಂದೇ ಕ್ಯಾಟರಿಂಗ್‍ನಿಂದ ಊಟ ಬಂದಿತ್ತು. ಜಿಲ್ಲಾ ವಿಶೇಷ ಕಾರ್ಯಕಾರಿಣಿಗೆ ಸಹಿ ಊಟದ ವ್ಯವಸ್ಥೆ ಇದ್ದರೆ, ಅಸಮಧಾನಿತರ ಸಭೆಗೆ ಟಮೋಟಾ ಬಾತ್, ಮೊಸರನ್ನ, ಬೋಂಡಾ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.