ಮುಖ್ಯ ಸುದ್ದಿ
ರಾಷ್ಟ್ರಮಟ್ಟದ ಅವಾರ್ಡ್ ಪಡೆದ ಚಿತ್ರದುರ್ಗ ಡಿಸಿಸಿ ಬ್ಯಾಂಕ್ | ದೇಶದ ಎರಡನೇ ಅತ್ಯುನ್ನತ ಬ್ಯಾಂಕ್ ಮನ್ನಣೆ
ಚಿತ್ರದುರ್ಗ ನ್ಯೂಸ್.ಕಾಂ: ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್‍ನಿಂದ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ದೇಶದ ಎರಡನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಪಡೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ಹೇಳಿದರು.
ನಗರದ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 351 ಡಿ.ಸಿ.ಸಿ. ಬ್ಯಾಂಕುಗಳ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 02 ನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ನಮಗೆ ಲಭಿಸಿದೆ. ತೆಲಂಗಾಣದ ಕರೀಂ ನಗರದ ಡಿಸಿಸಿ ಬ್ಯಾಂಕ್ ಪ್ರಥಮ ಹಾಗೂ ರಾಜಾಸ್ಥಾನದ ಜೈಪುರದ ಡಿಸಿಸಿ ಬ್ಯಾಂಕ್ ತೃತೀಯ ಸ್ಥಾನ ಪಡೆದುಕೊಂಡಿವೆ ಎಂದರು.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಸರ್ವ ಸದಸ್ಯರ ಬ್ಯಾಂಕ್ | 7.28 ಕೋಟಿ ರೂ. ನಿವ್ವಳ ಲಾಭ
ಸೆ.26 ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‍ಉಲ್ಲಾ ಷರೀಫ್ ಪ್ರಶಸ್ತಿ ಮತ್ತು ಪಾರಿತೋಷಕ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.
ಕಳೆದ 67 ವರ್ಷಗಳಿಂದ ರೈತರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮತ್ತಿತರೆ ಕೆಲಸಗಳಲ್ಲಿ ನಮ್ಮ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಬೆಳೆ ಸಾಲ ಮತ್ತು ವ್ಯವಸಾಯ ಅಭಿವೃದ್ಧಿಗೆ ಮಧ್ಯಮಾವಧಿ ಸಾಲ ಹಾಗೂ ವ್ಯವಸಾಯೇತರ ಸಾಲಗಳಾದ ಗೃಹ ನಿರ್ಮಾಣ/ಖರೀದಿ ಸಾಲ, ಚಿನ್ನಾಭರಣ ಸಾಲ, ವಾಹನ ಸಾಲ, ಮೀರಳತೆ ಸಾಲ, ನೌಕರ ವರ್ಗಕ್ಕೆ ಸಂಬಳಾಧಾರಿತ ಸಾಲ, ಸ್ಥಿರಾಸ್ತಿ ಆಧಾರದ ಮೇಲೆ ಸಾಲ, ಸ್ವಸಹಾಯ ಸಂಘಗಳಿಗೆ (ಎಸ್.ಹೆಚ್.ಜಿ) ಸಾಲ ನೀಡುವ ಮೂಲಕ ಎಲ್ಲಾ ವರ್ಗದ ಸಹಕಾರಿ ಬಂಧುಗಳ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ನೆರವು ಕಲ್ಪಿಸಿದ್ದೇವೆ ಎಂದು ವಿವರಿಸಿದರು.
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿತ್ರದುರ್ಗ ಜಿಲ್ಲಾ ಮಟ್ಟದ ಬ್ಯಾಂಕಾಗಿದ್ದು, 14 ಶಾಖೆಗಳನ್ನು ಹೊಂದಿದ್ದು, ಚಿತ್ರದುರ್ಗದಲ್ಲಿ ಕೇಂದ್ರ ಕಛೇರಿ ಹೊಂದಿರುತ್ತದೆ. ಕಳೆದ 67 ವರ್ಷಗಳಿಂದ ರೈತಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ. ಕಳೆದ ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನಲ್ಲಿ 415 ಸಹಕಾರ ಸಂಘಗಳು ಸದಸ್ಯತ್ವ ಪಡೆದಿವೆ.
ಸದ್ಯ ಬ್ಯಾಂಕ್, ಠೇವಣಿ ರೂ.509.19 ಕೋಟಿ ಸಂಗ್ರಹಣೆಯಾಗಿರುತ್ತದೆ. 2023-24ನೇ ಸಾಲಿಗೆ ಜಿಲ್ಲೆಯ 66000 ರೈತರಿಗೆ ರೂ.500 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ ವಿತರಿಸಲು ಹಾಗೂ 1140 ರೈತರಿಗೆ ರೂ.74.50 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ. 2022-23 ನೇ ಸಾಲಿನಲ್ಲಿ 500 ಸ್ವಸಹಾಯ ಸಂಘಗಳಿಗೆ ರೂ.10 ಕೋಟಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ.
ಜಿಲ್ಲೆಯ 8 ಗ್ರಾಮಗಳಲ್ಲಿ 8 ಹೊಸ ಶಾಖೆಗಳನ್ನು ತೆರಯಲು ಆರ್.ಬಿ.ಐ ನಿಂದ ಅನುಮತಿ ಪಡೆಯಲಾಗಿದೆ. ರಾಮಗಿರಿ, ಹೊರಕೆದೇವಪುರ, ಮಾಡದಕೆರೆ, ಹೊಸದುರ್ಗ ರೋಡ್, ದರ್ಮಪುರ, ಐಮಂಗಲ, ತಳಕು ಮತ್ತು ಸಾಸಲಹಳ್ಳಿಗಳಲ್ಲಿ ಬ್ಯಾಂಕಿನ ಹೊಸ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. 2022-23ನೇ ಸಾಲಿಗೆ ಬ್ಯಾಂಕ್ ರೂ.7.28 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು, ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್, ನಿರ್ದೇಶಕರಾದ ಟಿ.ಮಹಾಂತೇಶ್, ಎಸ್.ಆರ್.ಗಿರೀಶ್, ನಿಶಾನಿ ಜಯಣ್ಣ, ರಘುರಾಂ ರೆಡ್ಡಿ, ಶಶಿಧರ್, ದ್ಯಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.