Connect with us

    ಈ ಸುದ್ದಿ ಓದಿ ನೀವೇ ಬೆಚ್ಚಿ ಬೀಳ್ತಿರಿ..ಕೋಟೆನಾಡಲ್ಲಿ ಏರುತ್ತಿದೆ ನಾಯಿ ಕಡಿತದ ಗ್ರಾಫ್‌

    ಮುಖ್ಯ ಸುದ್ದಿ

    ಈ ಸುದ್ದಿ ಓದಿ ನೀವೇ ಬೆಚ್ಚಿ ಬೀಳ್ತಿರಿ..ಕೋಟೆನಾಡಲ್ಲಿ ಏರುತ್ತಿದೆ ನಾಯಿ ಕಡಿತದ ಗ್ರಾಫ್‌

    ಚಿತ್ರದುರ್ಗನ್ಯೂಸ್.ಕಾಂ

    2023 ಡಿಸೆಂಬರ್ 3: ಜೆಸಿಆರ್ ಬಡಾವಣೆಯ ಆರನೇ ಕ್ರಾಸ್‌ನಲ್ಲಿ ಸ್ನೇಹಿತರ ಜತೆ ಶನಿವಾರ ಸಂಜೆ ಆಟವಾಡುತ್ತಿದ್ದ ಆರು ವರ್ಷದ ಸಾಯಿ ಚರಣ್ ಮೇಲೆ ದಾಳಿ ನಡೆಸಿದ ಬೀದಿನಾಯಿಗಳು ಬರೋಬ್ಬರಿ 11 ಬಾರಿ ಕಚ್ಚಿ ಗಾಯಗೊಳಿಸಿವೆ. ಕೈ, ಕಾಲು ಸೇರಿದಂತೆ ದೇಹದ 11 ಕಡೆಗಳಲ್ಲಿ ನಾಯಿ ಕಚ್ಚಿದ ಗುರುತುಗಳು ಕಂಡುಬಂದಿವೆ.

    2023 ಮೇ 19: ಚಿಕ್ಕಜಾಜೂರು ಗ್ರಾಮದ ಹಳೆ ಆಂಜನೇಯಸ್ವಾಮಿ ದೇವಸ್ಥಾನದ ಬೀದಿಯ ಮನೆಯ ಮುಂದಿನ ಕಟ್ಟೆ ಮೇಲೆ ಕುಳಿತಿದ್ದ 94 ವರ್ಷದ ವೃದ್ಧೆ ಕಲ್ಲಳ್ಳೆರ ಲಕ್ಷ್ಮಮ್ಮ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಗಾಯಗೊಳಿಸಿತ್ತು. ವೃದ್ಧೆಯ ಎರಡೂ ಕೈ ಹಾಗೂ ಕಾಲುಗಳಿಗೆ ಕಚ್ಚಿತ್ತು.

    2023 ಫೆಬ್ರವರಿ 23: ಹಿರಿಯೂರು ತಾಲ್ಲೂಕಿನ ಜಡೇಗೊಂಡನಹಳ್ಳಿಯಲ್ಲಿ ಒಂದೇ ದಿನ 15 ಜನರಿಗೆ ಹುಚ್ಚು ನಾಯಿ ಕಚ್ಚಿತ್ತು. ಇದರಿಂದ ಮಹಿಳೆಯರು, ಮಕ್ಕಳು ಆತಂಕಕ್ಕೆ ಒಳಗಾಗಿದ್ದರು.
      ***
    ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಎದೆನಡುಗಿಸುವಷ್ಟು ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಬೀದಿ ನಾಯಿಯಿಂದ ಕಚ್ಚಿಸಿಕೊಂಡವರ ಸಂಖ್ಯೆ ಏರಿಕೆ ಆಗುತ್ತಿದೆ. ಇದಕ್ಕೆ ಮೇಲಿನ ಮೂರು ಘಟನೆಗಳು ಉದಾಹರಣೆಗಳಾಗಿವೆ.

    ಇದನ್ನೂ ಓದಿ: ಚಿತ್ರದುರ್ಗ– ತುಮಕೂರು ನಡುವೆ ಏರ್‌ಪೋರ್ಟ್‌; ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಚಿಂತನೆ

    2023 ರ ಜನವರಿಯಿಂದ ಅಕ್ಟೋಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 9,726 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಚಿತ್ರದುರ್ಗ, ಚಳ್ಳಕೆರೆಯಲ್ಲಿ ಎರಡು ಸಾವಿರ ದಾಟಿದೆ. ಮೊಳಕಾಲ್ಮುರಿನಲ್ಲಿ ಸಾವಿರದ ಸನಿಹದಲ್ಲಿದೆ. 2018ರಲ್ಲಿ 5,492, 2019ರಲ್ಲಿ 7,723, 2020ರಲ್ಲಿ 6,778, 2021 ಜನವರಿಯಿಂದ 2022 ಮೇ ಅಂತ್ಯಕ್ಕೆ, 11,739 ನಾಯಿ ಕಡಿತಕ್ಕೆ ಜನರು ಸಮಸ್ಯೆಗೆ ಒಳಗಾಗಿದ್ದಾರೆ.

    ಮನೆಯ ಮುಂಭಾಗದಲ್ಲಿ ಪುಟಾಣಿಗಳು ಆಟವಾಡುತ್ತಿದ್ದರೆ ಸಾಕು, ಇದ್ದಕ್ಕಿದಂತೆ ಗುಂಪು ಕಟ್ಟಿಕೊಂಡು ಬರುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತಿವೆ. ಮಕ್ಕಳು ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಘಟನೆಗಳು ಇಲ್ಲಿನ ಜನರನ್ನು ಆತಂಕಕ್ಕೆ ದೂಡಿವೆ.

    ಇದು ಕೇವಲ ಒಂದು ಬಡಾವಣೆ, ತಾಲ್ಲೂಕಿನ ಸಮಸ್ಯೆಯಲ್ಲ, ಇಡೀ ಜಿಲ್ಲೆಯ ಕಥೆ. ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳದ್ದೇ ಕಾರುಬಾರು. ಒಂದೆರಡು ವರ್ಷಗಳಲ್ಲಿ ನೂರಾರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ. ಬೀದಿಗಳಲ್ಲಿ, ಮನೆಯ ಮುಂಭಾಗ ಸದಾ ಇರುತ್ತವೆ. 4ರಿಂದ 6 ವರ್ಷದೊಳಗಿನ ಮಕ್ಕಳು ಆಟವಾಡಲು ಸಾಧ್ಯವಾಗದಂಥ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ.

    ಇದನ್ನೂ ಓದಿ: ಛೇ…ಮೂಕ ಪ್ರಾಣಿಗಳ ಮೇಲೆ ಇದೆಂಥಾ ದ್ವೇಷ..

    ಮನೆ ಸಮೀಪದಲ್ಲಿ ಆಟವಾಡುವ ಸಂದರ್ಭ ಮಕ್ಕಳನ್ನು ನಾಯಿಗಳು ಎಳೆದೊಯ್ದು ಕಚ್ಚಿ ಗಾಯಗೊಳಿಸಿರುವ ಉದಾಹರಣೆ ಸಾಕಷ್ಟಿವೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಪುಟಾಣಿಗಳನ್ನು ರಕ್ಷಿಸಿದ್ದಾರೆ. ಕೆಲವೊಮ್ಮೆ ನಾಗರಿಕರ ಆಕ್ರೋಶ ಕಟ್ಟೆಯೊಡೆದು ನಾಯಿಗಳನ್ನು ಕೊಂದೇ ಬಿಡಬೇಕು ಎಂಬ ಹಂತವೂ ತಲುಪಿದೆ.

    ಯಾವ ಬೀದಿಯಲ್ಲಿ ನಾಯಿಗಳಿಲ್ಲ ಎಂದು ಹುಡುಕಿ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ. ಅದಕ್ಕೆ ಬಹುತೇಕರು ಒಳಮಾರ್ಗಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್‌ ಹಾಕಿ ಬದಲಿ ಮಾರ್ಗ ಕಂಡುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕುರಿಗಳ ಮೇಲೆ, ಮಕ್ಕಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.

    ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಆಜಾದ್‌ ನಗರ, ಚೇಳುಗುಡ್ಡ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಬುರಜುನಹಟ್ಟಿ, ಜೆಸಿಆರ್‌ ಬಡಾವಣೆ, ಬ್ಯಾಂಕ್‌ ಕಾಲೊನಿ, ಕೆಳಗೋಟೆ, ಐಯುಡಿಪಿ ಬಡಾವಣೆ, ಕಾಮನಬಾವಿ ಬಡಾವಣೆ, ಕೋಟೆ ಮುಖ್ಯ ರಸ್ತೆ ಸೇರಿ ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳು ಕಾರುಬಾರು ನಡೆಸುತ್ತಿವೆ. ಕೊಳಚೆ ಪ್ರದೇಶಗಳಲ್ಲಿ ಪರಿಸ್ಥಿತಿ ಕೈಮೀರಿದೆ.

    ಮುನ್ಸಿಪಲ್ ಕಾಲೊನಿ, ಹಳೆ ಧರ್ಮಶಾಲಾ ರಸ್ತೆ, ಬುದ್ಧನಗರ, ಸಿ.ಕೆ. ಪುರ ಬಡಾವಣೆ, ಪ್ರಸನ್ನ ಚಿತ್ರಮಂದಿರದ ರಸ್ತೆ, ಮಟನ್‌ ಮಾರುಕಟ್ಟೆ, ಖಾಸಗಿ ಬಸ್‌ ನಿಲ್ದಾಣ, ಎಪಿಎಂಸಿ ಆವರಣ ಸೇರಿ ಕೊಳೆಗೇರಿ ಪ್ರದೇಶ, ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುತ್ತಿವೆ.

    ರಾತ್ರಿ ವೇಳೆ ಮಾತ್ರ ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಎರಗುತ್ತಿದ್ದ ನಾಯಿಗಳು ಇತ್ತೀಚಿಗೆ ಹಗಲಿನಲ್ಲೂ ದಾಳಿ ನಡೆಸುತ್ತಿವೆ. ಇದರಿಂದ ಗಾಯಗೊಂಡವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ನಾಯಿ ಕಡಿತದಿಂದಲೂ ಕೆಲ ನಾಗರಿಕರು ನೋವು ಅನುಭವಿಸಿ, ಚಿಕಿತ್ಸೆ ಪಡೆದಿದ್ದಾರೆ.

    ನಾಯಿಗಳು ಮಧ್ಯರಾತ್ರಿ ಬೊಗಳುವ ಕಾರಣ ಅನೇಕ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡದಂಥ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹಲವರ ಮನೆಯ ಕಾಂಪೌಂಡ್‌ ಮುಂಭಾಗವೇ ಮಲಗಿರುತ್ತವೆ. ಒಮ್ಮೊಮ್ಮೆ ಗೋಡೆ ಹಾರಿ ಕಾಂಪೌಂಡ್‌ ಒಳಗೆ ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡಿರುವ ಉದಾಹರಣೆಗಳಿವೆ.

    ರಾತ್ರಿ ವೇಳೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಬರುವಂಥ ನಾಯಿ, ಹಂದಿ, ಜಾನುವಾರನ್ನು ಗುಂಪು ನಾಯಿಗಳು ಅಟ್ಟಾಡಿಸಿ, ಓಡಿಸಿಕೊಂಡು ಹೋಗಿವೆ. ಈ ಸಂದರ್ಭದಲ್ಲೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಾಗರಿಕರನ್ನು ಕೆಲವೊಮ್ಮೆ ಕಚ್ಚಿವೆ. ಆಹಾರ ಹುಡುಕಿಕೊಂಡು ನಗರಕ್ಕೆ ಬರುವ ಮಂಗಗಳ ಮೇಲೂ ದಾಳಿ ನಡೆಸಿವೆ.

    ಇನ್ನೂ ಇಲ್ಲಿನ ಕೆಲ ರಸ್ತೆಗಳಲ್ಲಿರುವ ಪಾಳು ಕಟ್ಟಡಗಳು ಬೀದಿ ನಾಯಿಗಳಿಗೆ ಆಶ್ರಯ ತಾಣಗಳಾಗಿವೆ. ಗುಂಪು ಗುಂಪಾಗಿ ಸಾಗುವುದರಿಂದ ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾಹನಕ್ಕೆ ಅಡ್ಡವಾದಾಗ ತಪ್ಪಿಸಲು ಹೋಗಿ ಸವಾರರು ಕೈಕಾಲು ಪೆಟ್ಟು ಮಾಡಿಕೊಂಡಿದ್ದಾರೆ.

    ನಾಯಿಗಳನ್ನು ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಒಂಟಿಯಾಗಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಜನರ ಮೇಲೆ ದಾಳಿ ನಡೆಸುತ್ತಿವೆ. ಕೂಡಲೇ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು. ಇಲ್ಲವಾದರೆ, ಇನ್ನಷ್ಟು ಜನ ನಾಯಿಗಳ ದಾಳಿಗೆ ತುತ್ತಾಗಬೇಕಾಗುತ್ತದೆ ಎಂದು ನಾಗರಿಕರು ಕಳವಳ ಹೊರಹಾಕಿದ್ದಾರೆ.

    ನಾಯಿ ದಾಳಿಗೆ ಒಳಗಾದವರು (2023 ಜನವರಿಯಿಂದ ಅಕ್ಟೋಬರ್‌ ಅಂತ್ಯಕ್ಕೆ)

    ತಾಲ್ಲೂಕು – ಪ್ರಕರಣ
    ಚಿತ್ರದುರ್ಗ – 2628
    ಚಳ್ಳಕೆರೆ – 2142
    ಹಿರಿಯೂರು – 1311
    ಹೊಳಲ್ಕೆರೆ – 1416
    ಹೊಸದುರ್ಗ – 1516
    ಮೊಳಕಾಲ್ಮುರು – 713
    ಒಟ್ಟು –  9726

    ( ಮಾಹಿತಿ: ಜಿಲ್ಲಾ ಸರ್ವೇಕ್ಷಣಾ ಘಟಕ)

    ಕೂಡಲೇ ಆಸ್ಪತ್ರೆಗೆ ಕರೆತನ್ನಿ

    ಸೆಪ್ಟಂಬರ್‌ನಿಂದ ಜನವರಿವರೆಗೂ ನಾಯಿಗಳು ದೈಹಿಕ ಬದಲಾವಣೆ ಕಾಣುತ್ತವೆ. ಆ ಸಮಯದಲ್ಲಿ ನಾಯಿಗಳು ಗುಂಪಾಗಿ ತಿರುಗಾಡುವುದು ಹೆಚ್ಚು. ಈ ವೇಳೆ ಅವುಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ನಾಯಿ ಕಚ್ಚಿದಾಗ ಗಾಯಕ್ಕೆ ಸುಣ್ಣ, ಕಾಫಿಪುಡಿ, ಅರಿಶಿಣಪುಡಿ ಹಚ್ಚುವ ಬದಲು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಆಗ ಮಾತ್ರ ಸಮಸ್ಯೆ ತಪ್ಪಿಸಬಹುದು.

    ನಾಯಿ ಕಡಿದ ಭಾಗವನ್ನು ಬಟ್ಟೆ ಒಗೆಯುವ ಸಾಬೂನಿಂದ ಚೆನ್ನಾಗಿ ತೊಳೆದು ಬಳಿಕ ಆಸ್ಪತ್ರೆಗೆ ಕರೆತರಬೇಕು. ಎಆರ್‌ವಿ ಚುಚ್ಚುಮದ್ದನ್ನು ಕೊಡಿಸಬೇಕು. ಕಚ್ಚಿದ ದಿನ, 3 ನೇ ದಿನ, 7 ನೇ ದಿನ, 14ನೇ ದಿನ ಮತ್ತು 21 ನೇ ದಿನ 5 ಬಾರಿ ಚುಚ್ಚುಮದ್ದು ತೆಗೆದುಕೊಳ್ಳಬೇಕು ಎನ್ನುತ್ತಾರೆ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌.

    ಚಿತ್ರದುರ್ಗ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಿದ್ಧತೆಗಳನ್ನು ಮಾಡಿಕೊಂಡು ಒಂದೆರಡು ದಿನದಲ್ಲಿ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತದೆ.
    ಎಂ.ರೇಣುಕಾ, ಪೌರಾಯುಕ್ತೆ, ಚಿತ್ರದುರ್ಗ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top