ಮುಖ್ಯ ಸುದ್ದಿ
ಇಂದು ಮಧ್ಯಾಹ್ನ ಚಿತ್ರದುರ್ಗಕ್ಕೆ ಭಗವಂತ ಖೂಬಾ
ಚಿತ್ರದುರ್ಗ ನ್ಯೂಸ್
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆ.30ರ ಮಧ್ಯಾಹ್ನ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ.
ನಗರದ ಕೆಎಚ್‍ಬಿ ಕಾಲೋನಿ 3ನೇ ಹಂತ, 9ನೇ ಕ್ರಾಸ್‌ನ ಭರತ್‌ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಮಂಗಳವಾರ ರಾತ್ರಿ ನಿಧನರಾದ ಭರತ್‌ಕುಮಾರ್ ಅವರ ತಂದೆ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಅಂಚೆ ಇಲಾಖೆ ನಿವೃತ್ತ ಹೆಡ್‌ಪೋಸ್ಟ್ ಮಾಸ್ಟರ್ ಎಂ.ಮಲ್ಲಿಕಾರ್ಜುನಪ್ಪ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳಿ ರಸ್ತೆ ಮಾರ್ಗವಾಗಿ ಸಂಜೆ 4 ಗಂಟೆಗೆ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಹಿರಿಯೂರು ತಾಲೂಕು ಚಿಕ್ಕಸಿದ್ದವ್ವನಹಳ್ಳಿ ಮೂಲದ ಮಲ್ಲಿಕಾರ್ಜುನಪ್ಪ, ಅಂಚೆ ಇಲಾಖೆ ನಿವೃತ್ತ ನೌಕರರ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾಗಿ ಹಲವು ಯೋಗ ಶಾಖೆಗಳನ್ನು ತೆರೆದಿದ್ದರು. ಗುರುವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಚಿಕ್ಕಸಿದ್ದವ್ವನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.