ಮುಖ್ಯ ಸುದ್ದಿ
ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಆಕ್ರೋಶ | ಡಿಸಿ ಕಚೇರಿ ಎದುರು ಸರ್ಕಾರದ ವಿರುದ್ಧ ವಾಗ್ದಾಳಿ

ಚಿತ್ರದುರ್ಗ ನ್ಯೂಸ್.ಕಾಂ
ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಬಂದಿದೆ. ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು, ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಉಂಟಾಗಿದೆ. ಜೊತೆಗೆ ರಾಜ್ಯದಲ್ಲಿ ವಿದ್ಯುತ್ ಅಭಾವದಿಂದ ರೈತರ ಪಂಪಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು. ಆದರೆ ಅನಿಯಮಿತ ಲೋಡ್ ಶೆಡಿಂಗ್ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬರಗಾಲಕ್ಕೆ ತುತ್ತಾಗಿರುವ ರೈತರು ಈಗಾಗಲೇ ಶೇ 80 ರಷ್ಟು ಬೆಳೆಗಳನ್ನು ಬಿತ್ತನೆ ಮಾಡಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆಯಾಗಿ ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವಾರು ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ ಯೋಜನೆ, ರೈತ ವಿಧ್ಯಾನಿದಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಈ ಎಲ್ಲ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ.
ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ಜನ ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ಪತ್ರಿಕಾಗೋಷ್ಠಿ | ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಕೆ.ಎಸ್.ನವೀನ್ ವಾಗ್ದಾಳಿ
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು ಗಮನ ಹರಿಸುವ ಮೂಲಕ ತಕ್ಷಣ ರೈತರ ಸಹಾಯಕ್ಕೆ ಬರಬೇಕಾದ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ರೈತರ ಪಂಪಸೆಟ್‍ಗಳಿಗೆ ಉಂಟಾಗಿರುವ ಅನಿಯಮಿತ ಲೋಡ್ ಶೆಡಿಂಗ್ ರದ್ದು ಪಡಿಸಿ, ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವುದು ಸೇರಿದಂತೆ ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲ ಸ್ಥಿತಿ ನಿವಾರಣೆಗೋಸ್ಕರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆಯಂತಹ ಅನಾಹುತಗಳಿಗೆ ಆಸ್ಪದಕೊಡದಿರುವ ರೀತಿಯಲ್ಲಿ ರೈತ ವರ್ಗಕ್ಕೆ ಧೈರ್ಯ ತುಂಬುವ ಮತ್ತು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ನಂದಿ, ಮುಖಂಡರಾದ ಶಿವಣ್ಣಾಚಾರ್, ನಾಗರಾಜ್ ಬೇದ್ರೆ, ಶ್ಯಾಮಲಾ ಶಿವಪ್ರಕಾಶ್, ರೇಖಾ, ಶಿವಪ್ರಕಾಶ್ ದಗ್ಗೆ, ಚಂದ್ರಶೇಖರ ವಿ.ಪಾಳ್ಯ ಇತರರಿದ್ದರು.
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/EQUQpKalYFT1fVcJDTDjCk)
