Connect with us

ಎರಡು ದಿನ ನಿದ್ರಿಸದ ನಾಯಕನಹಟ್ಟಿ | ತಿಪ್ಪೇರುದ್ರಸ್ವಾಮಿ ಮಡಿಲಲ್ಲಿ ಭಜನೆ ವೈಭವ | ಬೆಳದಿಂಗಳ ಹುಣ್ಣಿಮೆ ಸಾಥ್‌

ಮುಖ್ಯ ಸುದ್ದಿ

ಎರಡು ದಿನ ನಿದ್ರಿಸದ ನಾಯಕನಹಟ್ಟಿ | ತಿಪ್ಪೇರುದ್ರಸ್ವಾಮಿ ಮಡಿಲಲ್ಲಿ ಭಜನೆ ವೈಭವ | ಬೆಳದಿಂಗಳ ಹುಣ್ಣಿಮೆ ಸಾಥ್‌

‌CHITRADURGA NEWS | 27 MARCH 2024
ಚಿತ್ರದುರ್ಗ: ವರ್ಷದ ಎರಡು ದಿನ ಯೋಗಿಪುರುಷ ತಿಪ್ಪೇರುದ್ರಸ್ವಾಮಿಯ ನೆಲೆಬೀಡು ನಾಯಕನಹಟ್ಟಿ ನಿದ್ರಿಸುವುದಿಲ್ಲ. ಬರೋಬ್ಬರಿ 48 ಗಂಟೆ ಇಡೀ ಊರು ಎಚ್ಚರವಾಗಿರುತ್ತದೆ.

ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ನಡೆಯುವ ದೊಡ್ಡ ರಥೋತ್ಸವಕ್ಕೆ ಇಂತಹ ಒಂದು ಅಚ್ಚರಿಗೆ ಸಾಕ್ಷಿಯಾಗುತ್ತದೆ. ಚಿತ್ರದುರ್ಗ, ಚಳ್ಳಕೆರೆ, ಜಗಳೂರು, ಭರಮಸಾಗರ, ದಾವಣಗೆರೆ, ಕೊಟ್ಟೂರು, ಆಂಧ್ರಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ, ಅನಂತಪುರ ಜಿಲ್ಲೆಯಿಂದ ಆಗಸುವ ಲಕ್ಷಾಂತರ ಭಕ್ತರ ಜತೆ ಸಾಧು-ಸಂತರ ಸಮಾಗಮವಾಗುವುದು ವಿಶೇಷ.

ರಥೋತ್ಸವಕ್ಕೆ ಮುನ್ನ ದಿನ ಎತ್ತಿನ ಬಂಡಿ, ಟ್ರ್ಯಾಕ್ಟರ್‌, ಟೆಂಪೋಗಳಲ್ಲಿ ತಂಡೋಪತಂಡವಾಗಿ ಹಟ್ಟಿಗೆ ಆಗಮಿಸುತ್ತಾರೆ. ಊರಿನ ಸುತ್ತಲಿನ ತೋಟ, ಬಯಲು ಪ್ರದೇಶ, ಒಳಮಠ, ಹೊರ ಮಠದ ಆವರಣದಲ್ಲಿ ಟೆಂಟ್‌ಗಳನ್ನು ಹಾಕಿ ಜಾತ್ರೆ ಸಿದ್ಧತೆ ನಡೆಸುತ್ತಾರೆ. ಮೂರನೇ ದಿನಕ್ಕೆ ಊರುಗಳಿಗೆ ತೆರಳುತ್ತಾರೆ.

ಕ್ಲಿಕ್ ಮಾಡಿ ಓದಿ: ಹೊಸಪೇಟೆ ಕಾರಿನಲ್ಲಿತ್ತು ₹ 20.35 ಲಕ್ಷ | ಚೆಕ್‌ ಪೋಸ್ಟ್‌ನಲ್ಲಿ ಹಣ ವಶ

ಮಂಗಳವಾರ ಮಧ್ಯಾಹ್ನ ರಥೋತ್ಸವ ಮುಗಿಯುತ್ತಿದ್ದಂತೆ ಜಾತ್ರೆಯಲ್ಲಿ ಜನ ಕಡಿಮೆಯಾಗುತ್ತಾರೆ ಎಂದು ಕೊಂಡರೆ ತಪ್ಪಾದಿತು. ಮಂಗಳವಾರ ರಾತ್ರಿ ಪೂರ್ತಿ ಇಡೀ ಊರು ಭಜನೆಯ ಗುಂಗಿನಲ್ಲಿ ಮುಳುಗಿತ್ತು.

ಒಳಮಠ ಹಾಗೂ ಹೊರ ಮಠದ ಮುಂಭಾಗದ ರಾತ್ರಿ 11 ಗಂಟೆಯಾದರು ಜನರು ಕೊಬ್ಬರಿ ಸುಟ್ಟು ದೇವರಿಗೆ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಹಗಲಿನಂತೆ ಕಂಡು ಬಂದಿತು. ರಥ ಬೀದಿಯಲ್ಲಿ ವಿರಾಜನಮಾನವಾಗಿದ್ದ ರಥಕ್ಕೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಊರಿನ ಪ್ರತಿ ಬೀದಿಯಲ್ಲಿ ಜನರಿಂದ ತುಂಬಿತ್ತು. ಅದು ರಾತ್ರಿ 12 ರ ಸುಮಾರಿಗೆ !.

ಕೊಬ್ಬರಿ, ಖಾರಮಂಡಕ್ಕಿ, ಬಳೆ, ಕುಂಕುಮ, ದವನ, ತಿಪ್ಪೇಶನ ಫೋಟೋ, ಎಲೆ ಅಡಿಕೆ, ಬೊಂಬೆ ಮಾರಾಟದ ಅಂಗಡಿಗಳ ವ್ಯಾಪಾರ ಸಹ ಜೋರಾಗಿತ್ತು. ಬೆಳಿಗ್ಗೆಯಿಂದ ವ್ಯಾಪಾರ ಮಾಡಿದವರು ಸುಸ್ತಾಗಿ ಟೆಂಟ್‌ ಅಂಗಡಿಗಳಲ್ಲೇ ಮಲಗಿದ್ದರೆ, ಕೆಲವರು ಉತ್ಸಾಹದಿಂದ ವ್ಯಾಪಾರ ಮಾಡುತ್ತಿದ್ದರು. ಇಳಿವಯಸ್ಸಿನವರು ಕಾಲಿಗೆ ನಿಂಬೆಹಣ್ಣು, ನೋವು ನಿವಾರಹ ಔಷಧಿಗಳನ್ನು ಹಚ್ಚಿಕೊಳ್ಳುತ್ತಾ ತಿಪ್ಪೇಶ…ಕಾಪಾಡು ಎನ್ನುತ್ತಾ ಮುಲುಗುತ್ತಾ ನಿದ್ರೆಗೆ ಜಾರುತ್ತಿದ್ದರು.

ವಿವಿಧ ಜಿಲ್ಲೆಗಳಿಂದ, ಹೊರರಾಜ್ಯಗಳಿಂದ ಆಗಮಿಸಿದ್ದ ಸಾಧು-ಸಂತರು ಹೊರಮಠದ ಆವರಣದಲ್ಲಿ ಜಮಾಯಿಸಿದ್ದರು. ಮಹಿಳೆ ಹಾಗೂ ಪುರುಷ ಸನ್ಯಾಸಿಗಳು, ಸಾಧುಗಳು ಗುಂಪು ಗುಂಪಾಗಿ ಹಾಡು ಭಜನೆಯಲ್ಲಿ ತೊಡಗಿದ್ದರು. ಇದರ ನಡುವೆ ಕಬ್ಬಿನ ಜ್ಯೂಸ್‌, ಟೀ ವ್ಯಾಪಾರ ಸಹ ಸಾಗಿತ್ತು.

ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | 26 ಮಾರ್ಚ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ರೇಟ್

ಇಡೀ ಊರಿಗೆ ಊರೇ ಹಾಸಿಗೆ ಆಕಾಶವೇ ಹೊದಿಕೆ ಎಂಬಂತೆ ಭಕ್ತರು ರಸ್ತೆ ಬದಿ, ಒಳಮಠ, ಹೊರ ಮಠದ ಆವರಣ,ಈಶ್ವರನ ದೇಗುಲ, ಪೋಲಿಸ್‌ ವಾಚ್‌ ಟವರ್‌, ಮನೆಗಳ ಅಂಗಳಗಳಲ್ಲಿ ತಮ್ಮ ಬ್ಯಾಗ್‌ಗಳನ್ನು ತಲೆಗೆ ಇಟ್ಟು ಕೊಂಡು ಸಾಲು ಸಾಲಾಗಿ ನಿದ್ರೆಗೆ ಜಾರಿದ್ದರು. ಎಚ್ಚರವಾದ ಕೂಡಲೇ ಒಂದು ಸುತ್ತು ಹಾಕಿ ಪುನಃ ಭಜನೆ ಪದ ಹಾಡುತ್ತಾ ಇಡೀ ರಾತ್ರಿ ಕಾಲ ಕಳೆದರು.

ತಿಪ್ಪೇಶನ ಜಾತ್ರೆಯನ್ನು ಹಗಲು ಕಣ್ತುಂಬಿಕೊಳ್ಳುವುದು ಒಂದು ಸಂಭ್ರಮವಾದರೆ ಹುಣ್ಣಿಮೆಯ ಚಂದ್ರನ ಬೆಳಕಲ್ಲಿ ನೋಡುವುದೇ ದಿವ್ಯ ಅನುಭೂತಿ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version