ಮುಖ್ಯ ಸುದ್ದಿ
ಬಿ.ವೈ.ವಿಜಯೇಂದ್ರ ಬಿಜೆಪಿಯ ರೋಹಿತ್ ಶರ್ಮಾ | ಬಿ.ಶ್ರೀರಾಮುಲು
ಚಿತ್ರದುರ್ಗ ನ್ಯೂಸ್.ಕಾಂ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ನಂತರ ಪಕ್ಷದಲ್ಲಿ ಅನೇಕ ಬೆಳವಣಿಗೆಗಳಾಗುತ್ತಿವೆ. ಕೆಲವರು ಅಸಮಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಉತ್ತಮ ಬೆಳವಣಿಗೆ ಎನ್ನುತ್ತಿದ್ದಾರೆ.
ಈ ನಡುವೆ ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಶ್ರೀರಾಮುಲು ವಿಜಯೇಂದ್ರ ಅವರ ಆಯ್ಕೆಯನ್ನು ಭಾರತ ಕ್ರಿಕೇಟ್ ತಂಡದ ನಾಯಕತ್ವಕ್ಕೆ ಹೋಲಿಕೆ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೇಟ್ ತಂಡದ ನಾಯಕರಾಗಿದ್ದರು. ಈಗ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡು ಯಶ್ವಸಿಯಾಗಿ ಮುನ್ನಡೆಸುತ್ತಿದ್ದಾರೆ. ನಮ್ಮ ಪಕ್ಷವನ್ನು ಬಿ.ವೈ.ವಿಜಯೇಂದ್ರ ಶರ್ಮಾ ರೀತಿಯಲ್ಲಿ ಮುನ್ನಡೆಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿದ ರಘುಚಂದನ್, ಅನಿತ್‍ಕುಮಾರ್
ಕಳೆದ 30ವರ್ಷಗಳಿಂದ ವಿಜಯೇಂದ್ರ ಅವರನ್ನು ನೋಡಿದ್ದೇನೆ. ಪಕ್ಷದ ಸಭೆ, ಮೀಟಿಂಗ್‍ಗಳಲ್ಲಿ ಮಾತನಾಡಿದ್ದೇನೆ. ಅವರ ಮನೆಯ ಸಂತೋಷದ ಸಂದರ್ಭ ಹಾಗೂ ದುಃಖ ಎರಡೂ ಸಂದರ್ಭಗಳಲ್ಲಿ ಅವರ ನಡತೆಯನ್ನು ಗಮನಿಸಿದ್ದೇನೆ ಎಂದರು.
ವಿಜಯೇಂದ್ರ ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಈವರೆಗೆ ಅನೇಕ ಜವಾಬ್ದಾರಿ ವಹಿಸಿಕೊಂಡು, ಪಕ್ಷ ಕೊಟ್ಟ ಎಲ್ಲ ಟಾಸ್ಕ್ ನಿಭಾಯಿಸಿದ್ದಾರೆ. ತಂದೆಯ ಸ್ಥಾನ ಶಿಖಾರಿಪುರದಲ್ಲಿ ಗೆದ್ದು ಬಂದಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ ಎಂದು ಬಹಳ ಹಿಂದೆಯೇ ಹೇಳಿದ್ದೆ ಎಂದು ಸ್ಮರಿಸಿದರು.
ರಾಜಕಾರಣದಲ್ಲಿ ಕುರ್ಚಿ ದೊಡ್ಡದು ಎನ್ನುವುದಕ್ಕಿಂತ ಮನುಷ್ಯ, ವರ್ಚಸ್ಸು ದೊಡ್ಡದು ಎಂದು ನೋಡಿದಾಗ ಕುರ್ಚಿಗೆ ಬೆಲೆ ಬರುತ್ತದೆ. ರಾಜಕಾರಣದಲ್ಲಿ ಹಿರಿಯರು ಅಥವಾ ಕಿರಿಯರು ಎನ್ನುವುದಕ್ಕಿಂತ ವರ್ಚಸ್ಸು ದೊಡ್ಡದು. ವಿಜಯೇಂದ್ರ ಕಿರಿಯರಾಗಿದ್ದರೂ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಬೇಕಾಗಿದೆ. ಪಕ್ಷ ವಿಜಯೇಂದ್ರ ಅವರಿಗೆ ಜವಾಬ್ದಾರಿ ಕೊಟ್ಟಿದೆ.
ಇದನ್ನೂ ಓದಿ: ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ
ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಸೋಮಣ್ಣ, ಯತ್ನಾಳ್, ನಾನು ಸೇರಿದಂತೆ ಎಲ್ಲರೂ ಸೇರಿಯೇ ಒಂದು ಕುಟುಂಬ. ನಾವೆಲ್ಲರೂ ಯಡಿಯೂರಪ್ಪನವರ ಜೊತೆಗೆ ಬೆಳೆದವರು ಎಂದರು.
ನಾಳೆ ವಿಜಯೇಂದ್ರ ಪಕ್ಷದ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಎಲ್ಲ ಜಿಲ್ಲೆಗಳಿಂದ ಪದಾಧಿಕಾರಿಗಳು ಭಾಗವಹಿಸಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಹೊಸ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಪಕ್ಷದ ಕಾರ್ಯರ್ತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.