ಮುಖ್ಯ ಸುದ್ದಿ
ಶಿಫಾರಸ್ಸು ಮಾಡಿಸಿ ಪಡೆದ ಪ್ರಶಸ್ತಿಗೆ ಮೌಲ್ಯವಿಲ್ಲ | ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
CHITRADURGA NEWS | 11 FEBRUARY 2024
ಚಿತ್ರದುರ್ಗ: ಪ್ರಶಸ್ತಿ ಪದವಿಗಳಿಂದ ದೂರ ಇರಬೇಕು ಎನ್ನುವುದು ಶರಣರ ಆಶಯ. ಯಾರು ಅಪರೂಪದ ಸಾಧನೆಯನ್ನು ಮಾಡಿರುತ್ತಾರೋ ಅಂತಹ ವ್ಯಕ್ತಿಯ ಬೆನ್ನು ತಟ್ಟಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಲಿಕ್ಕೆ ಸ್ಪೂರ್ತಿ ದೊರೆಯುತ್ತದೆ. ಎಷ್ಟೋ ಸಂದರ್ಭದಲ್ಲಿ ಸಾಧನೆ ಮಾಡಿರುವಂಥವರನ್ನು ಮರೆತು ಇನ್ಯಾರಿಗೋ ಪ್ರಶಸ್ತಿಯನ್ನು ಕೊಡುವಂಥ ಪದ್ಧತಿ ನಮ್ಮಲ್ಲಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆದ ತೋ ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭ-2024 ರ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡ್ತಾ ಇದೆ. ಈ ಪ್ರಶಸ್ತಿಯನ್ನು ಪಡೆದುಕೊಳ್ಳಲಿಕ್ಕೆ ಅನೇಕರು ಶಿಫಾರಸ್ಸು ಮಾಡಿಸಿ ಪ್ರಶಸ್ತಿ ಪಡೆದುಕೊಳ್ಳುವರು. ಆಗ ಆ ಪ್ರಶಸ್ತಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ: 280 ಮೀಟರ್ ಡಿವೈಡರ್ ತೆರವು | ಮುನ್ನೆಲೆಗೆ ಬಂದ ರಸ್ತೆ ವಿಸ್ತರಣೆ ಚರ್ಚೆ
ಇಲ್ಲಿ ನಂಜುಂಡಸ್ವಾಮಿಯವರ ಹೆಸರಿನಲ್ಲಿ ಗೌರವ ತರುವ ನಿಟ್ಟಿನಲ್ಲಿ ಹೂಲಿ ಶೇಖರ್ ಅವರು ಪ್ರಶಸ್ತಿಗೆ ಭಾಜನರಾಗಿರುವುದು ಅಭಿನಂದನಾರ್ಹ. ಹೂಲಿ ಶೇಖರ್ರವರು ಈ ಪ್ರಶಸ್ತಿಗೆ ಅರ್ಜಿಹಾಕಿ ಪಡೆದುಕೊಂಡವರಲ್ಲ. ನೀವೇ ಅವರನ್ನು ಗುರುತಿಸಿ ಗೌರವಿಸಿರುವುದು. ಆಗ ಪ್ರಶಸ್ತಿ ಪಡೆದುಕೊಂಡಂಥವರಿಗೂ ಗೌರವ, ಪ್ರಶಸ್ತಿ ಕೊಟ್ಟವರಿಗೂ ಗೌರವ ಬರುತ್ತದೆ ಎಂದು ತಿಳಿಸಿದರು.
ತೋ ನಂಜುಂಡಸ್ವಾಮಿಯವರು ಒಂದು ರೀತಿಯಲ್ಲಿ ಡಾಕ್ಟರ್ ಇದ್ದಂಗೆ. ಯಾರಿಗಾದರೂ ಖಾಯಿಲೆಯಾಗಿದ್ದರೆ ನಾವು ಪತ್ರ ಕಳಿಸುತ್ತಿದುದು ಡಾ. ಮಂಜುನಾಥ್ರವರಿಗೆ ಅಲ್ಲ; ನಂಜುಂಡಸ್ವಾಮಿಯವರಿಗೆ. ಆಗ ಆ ಪತ್ರ ಮಂಜುನಾಥ್ರವರ ಹತ್ತಿರ ಹೋಗ್ತಾ ಇತ್ತು. ಆಗ ರೋಗಿಗೆ ಚಿಕಿತ್ಸೆ ಕೊಡಿಸಿ ಯಾವುದೇ ಖರ್ಚಿಲ್ಲದೇ ರೋಗಿಗಳಿಗೆ ಚಿಕಿತ್ಸೆ ಕೊಡ್ತಾ ಇದ್ದರು. ನಂಜುಂಡಸ್ವಾಮಿ ಒಬ್ಬ ಅಪ್ಪಟ ಮಾನವೀಯತೆ ಇರುವಂಥ ವ್ಯಕ್ತಿ. ಎಲ್ಲರನ್ನು ಪ್ರೀತಿಸುವ ಗುಣ ಅವರಲ್ಲಿತ್ತು. ಯಾರನ್ನು ದ್ವೇಷಿಸುವಂಥ ಸ್ವಭಾವ ಅವರಲ್ಲಿರಲಿಲ್ಲ. ಅವರೇನೇ ಬರೆದರೂ ಹತ್ತಾರು ಜನರ ಜೊತೆಗೆ ಹಂಚಿಕೊಳ್ಳುತ್ತಿದ್ದರು. ಮಾದಾರ ಚೆನ್ನಯ್ಯ ನಾಟಕ ಬರೆದು ಮೊದಲು ಶಿವಸಂಚಾರ ನಾಟಕ ತಂಡದಿಂದಲೇ ಪ್ರಯೋಗ ಆಗಬೇಕು ಎಂದು ನಮಗೆ ಹೇಳಿದರು ಎಂದು ಸ್ಮರಿಸಿದರು.
ಒಬ್ಬ ವ್ಯಕ್ತಿ ತನ್ನ ಸ್ವ ಆಸಕ್ತಿಯಿಂದ ರಂಗಭೂಮಿಗೆ ಬಂದು ನಾಟಕ ರಚಿಸಿದರು. ಸಂಘಟನೆ ಮಾಡಿದರು. ಯಾರು ಒಳ್ಳೆಯ ಕೆಲಸ ಮಾಡಿತ್ತಾರೋ ಅವರನ್ನು ಗುರುತಿಸಿ ಗೌರವಿಸುವಂಥ ದೊಡ್ಡಗುಣ ತೋ ನಂಜುಂಡಸ್ವಾಮಿಯವರಲ್ಲಿತ್ತು ಎಂದರು.
ಎಲ್ಲರನ್ನೂ ಒಂದು ಕಡೆ ಸೇರಿಸಿ ಗೌರವಿಸುವಂಥ ಒಬ್ಬ ಮಾನವೀಯ ಗುಣವುಳ್ಳ ವ್ಯಕ್ತಿ. ಯಾರು ಒಳ್ಳೆಯ ಕೆಲಸ ಮಾಡಿ ಸಮಾಜಮುಖಿ ಇರುವಂಥ ಚಿಂತನೆಯನ್ನಿಟ್ಟುಕೊಂಡು ಸೇವಾ ಕಾರ್ಯಗಳನ್ನು ಮಾಡ್ತಾರೋ ಅಂಥವರನ್ನು ಜನರು ಬೇಗ ಮರೆತುಬಿಡ್ತಾರೆ. ಆದರೆ ನಂಜುಂಡಸ್ವಾಮಿಯವರನ್ನು ಮರೆಯದೇ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡ್ತಾ ಇರುವಂಥದ್ದು ಬಹಳ ಸಂತೋಷ ಪಡಬೇಕಾದ ವಿಷಯ ಎಂದು ತಿಳಿಸಿದರು.
ಈ ಪ್ರಶಸ್ತಿ ಪಡೆದುಕೊಂಡವರು ಹೂಲಿಶೇಖರ್ರವರು. ಹೂಲಿಶೇಖರ್ ತುಂಬಾ ಸೊಗಸಾಗಿ ನಾಟಕಗಳನ್ನು ಕಟ್ಟಿಕೊಡುವ ಗುಣ ಅವರಲ್ಲಿದೆ. ಅಂತಹ ಒಬ್ಬ ಪ್ರತಿಭಾನ್ವಿತರನ್ನು ಗುರುತಿಸಿರುವಂಥದ್ದು ಆ ಪ್ರಶಸ್ತಿಗೆ ಹಾಗೂ ನಂಜುಂಡಸ್ವಾಮಿ ಯವರಿಗೆ ನಿಜವಾಗಿಯೂ ಗೌರವ ಸಂದ ಹಾಗೆ ಎಂದರು.
ಈ ಸಂದರ್ಭದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ರಂಗಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ, ಚಲನಚಿತ್ರ ನಿರ್ದೇಶಕ ಬಿ ಸುರೇಶ್ ಮಾತನಾಡಿದರು. ಕೊನೆಯದಾಗಿ ನಟನ ಮೈಸೂರು ತಂಡದವರು ಕಣಿವೆಯ ಹಾಡು ನಾಟಕ ಪ್ರದರ್ಶನ ಮಾಡಿದರು.