ಮುಖ್ಯ ಸುದ್ದಿ
ಜಿಲ್ಲೆಯ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಹಾಗೂ ಸನ್ಮಾನ
ಚಿತ್ರದುರ್ಗ ನ್ಯೂಸ್.ಕಾಂ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐದು ಜನರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ತರಾಸು ರಂಗಮಂದಿರದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಈ ವರ್ಷದ ವಾಲ್ಮೀಕಿ ಪ್ರಶಸ್ತಿ ಪುರಸ್ಕøತರ ಪುಟ್ಟ ಪರಿಚಯ ಇಲ್ಲಿದೆ.
ಎಂ.ಎಎನ್.ಅಹೋಬಲಪತಿ:
ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರಾಗಿ ಕಾರ್ಯನಿರ್ವಹಿಸುತ್ತಿರುವ ಪಾವಗಡ ಮೂಲದ ಎಂ.ಎನ್.ಅಹೋಬಲಪತಿ ಈ ವರ್ಷದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ತೊಡಗಿಸಿಕೊಂಡು ನೊಂದವರು, ಹಾಸ್ಟೆಲ್ ವಿದ್ಯಾರ್ಥಿಗಳು, ಬಗರ್‍ಹುಕುಂ ಸಾಗುವಳಿದಾರರು ಸೇರಿದಂತೆ ಅನೇಕ ಧ್ವನಿಯಿಲ್ಲದವರ ಪರವಾಗಿ ಧ್ವನಿಯೆತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಹೋರಾಟದ ಬದುಕಿನಿಂದ ಪತ್ರಿಕಾ ಮಾಧ್ಯಮಕ್ಕೆ ಪದಾರ್ಪಣೆ ಮಾಡಿದ ಅಹೋಬಲಪತಿ, 90ರ ದಶಕದಲ್ಲೇ ಸುದ್ದಿಗಿಡುಗ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆನಂತರ ಲಂಕೇಶ್, ಇಂಡಿಯನ್ ಎಕ್ಸ್‍ಪ್ರೆಸ್, ಕನ್ನಡಪ್ರಭ, ದಿ ಸಂಡೆ ಇಂಡಿಯನ್, ರಾಜ್ಯ ಸರ್ಕಾರದ ಕಣಜ ಕೋಶದಲ್ಲೂ ಕಾರ್ಯನಿರ್ವಹಿಸಿದ ಅನುಭವಿ.
ಯುವ ಉದ್ಯಮಿ ಅರುಣ್‍ಕುಮಾರ್:
ಚಿತ್ರದುರ್ಗ ಜಿಲ್ಲೆಯಲ್ಲಿ ಅಹೋಬಲ ಅರುಣ್ ಎಂದೇ ಖ್ಯಾತರಾಗಿರುವ ಪಿ.ವಿ.ಅರುಣ್‍ಕುಮಾರ್ ಅತ್ಯಂತ ಕಿರಿಯ ವಯಸ್ಸಿಗೆ ಅತ್ಯುತ್ತಮ ಉದ್ಯಮಿಯಾಗಿ ರೂಪುಗೊಂಡಿದ್ದಾರೆ.
ಅಹೋಬಲ ಸ್ಟೀಲ್ಸ್ ಅಂಡ್ ಸೀಮೆಂಟ್ಸ್ ಮೂಲಕ ಉದ್ದಿಮೆ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ, ಈಗ ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿ ಅಹೋಬಲ ಟಿವಿಎಸ್ ಶೋ ರೂಂ ತೆರೆದು ಯಶಸ್ವಿಯಾಗಿದ್ದಾರೆ.
ಇಂಜಿನಿಯರಿಂಗ್ ಪದವಿ ಮಾಡಿದರೂ ಖಾಸಗಿ ಕಂಪನಿ, ಸರ್ಕಾರಿ ನೌಕರಿಯ ಆಸೆಗೆ ಬೀಳದೇ ಸ್ವಂತ ಉದ್ಯಮ ಕಟ್ಟಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಮುಂದಡಿ ಇಡುತ್ತಿರುವ ಅರುಣ್, ಮೂಲತಃ ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದವರು.
ಸಿಮೆಂಟ್ ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದಕ್ಕಾಗಿ 2016ರಲ್ಲೇ ಅರುಣ್ ಅವರಿಗೆ ಜೆಕೆ ಸಿಮಂಟ್ಸ್‍ನಿಂದ 2017 ರಿಂದ 2022 ರವರೆಗೆ ಮಾಡಿದ ಸಾಧನೆಗೆ ಅಲ್ಟ್ರಾಟೆಕ್‍ನಿಂದಲೂ ಪುರಸ್ಕಾರಗಳು ಸಿಕ್ಕಿವೆ.
ಟಿವಿಎಸ್ ಬೈಕುಗಳ ಮಾರಾಟದಲ್ಲಿ ಕರ್ನಾಟಕ-2ರಲ್ಲಿ ನಂಬರ್ ಒನ್ ಸ್ಥಾನ ಪಡೆದ ಕಾರಣಕ್ಕೆ ಎರಡು ಬಾರಿ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪಗೆ ವಾಲ್ಮೀಕಿ ಪ್ರಶಸ್ತಿ
ಖ್ಯಾತ ಕಲಾವಿದ ಕ್ರಿಯೇಟಿವ್ ವೀರೇಶ್:
ಚಿತ್ರದುರ್ಗದ ಓರ್ವ ಛಾಯಾಗ್ರಾಹಕ ಟಿ.ಎಂ.ವೀರೇಶ್, ಕ್ರಿಯೇಟಿವ್ ವೀರೇಶ್ ಆಗಿ ಬೆಳೆಯುವುದರ ಹಿಂದೆ ಅಗಾಧವಾದ ಪರಿಶ್ರಮ ಅಡಗಿದೆ.
ಪೋಟೋಗ್ರಫಿಯಲ್ಲಿ ಅತ್ಯಂತ ಕ್ರಿಯಾಶೀತೆ ಹೊಂದಿದ್ದ ವೀರೇಶ್ ಅವರಿಗೆ ಪೆನ್ಸಿಲ್ ಆರ್ಟ್ ಒಲಿದು ಬಂದಿದೆ. ಅಲ್ಲಮನ ಆಳ ಅಗಲ ಎನ್ನುವ ಪರಿಕಲ್ಪನೆಯಡಿ ಇತ್ತಿಚೆಗೆ ಅವರು ರಚಿಸಿದ ಸರಣಿ ಕಲಾಕೃತಿಗಳು ಬೆಂಗಳೂರು, ಪುಣೆ ಮತ್ತಿತರೆಡೆ ಪ್ರದರ್ಶನಗೊಂದು ದುರ್ಗದ ಹಿರಿಮೆಯನ್ನು ಹೆಚ್ಚಿಸಿವೆ.
ಕ್ರಿಯೇಟಿವ್ ವೀರೇಶ್ ರಚಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯೊಂದಿಗೆ ಇರುವ ಪೆನ್ಸಿಲ್ ಸ್ಕೆಚ್ ಕಲಾಕೃತಿ ಸಾಕಷ್ಟು ಜನಮೆಚ್ಚುಗೆ ಪಡೆದಿತ್ತು. ಈ ಕಲಾಕೃತಿಯನ್ನು ಚಿತ್ರದುರ್ಗ ಬಿಜೆಪಿ ಖುದ್ದು ಪ್ರಧಾನಿ ನರೇಂದ್ರ ಮೋದಿಗೆ ನೀಡಿದಾಗ, ಮೋದಿ ಒಂದು ಕ್ಷಣ ಪೋಟೋವನ್ನು ಧಿಟ್ಟಿಸಿ ನೋಡಿದ್ದನ್ನು ಮರೆಯುವಂತಿಲ್ಲ.
ವೀರೇಶ್ ರಚಿಸಿರುವ ಯುವ ಮದಕರಿನಾಯಕರ ಭಾವಚಿತ್ರವನ್ನು ನಟ ಕಿಚ್ಚ ಸುದೀಪ್ ಅನಾವರಣ ಮಾಡಿದ್ದು, ಸಾಕಷ್ಟು ಜನ ಮೆಚ್ಚುಗೆ ಗಳಿಸಿದೆ.
ಯುವ ಸಂಶೋಧಕ ಡಾ.ಎನ್.ಎಸ್.ಮಹಂತೇಶ:
ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಪುರಾತತ್ವ ಹಾಗೂ ಸಂಸ್ಕøತಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯುವ ಸಂಶೋಧಕ ಡಾ.ಎನ್.ಎಸ್.ಮಹಂತೇಶ ಅವರನ್ನು ಇತಿಹಾಸ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಪ್ರಾಗೈತಿಹಾಸಿಕ ಸಂಸ್ಕøತಿ, ದೇವಾಲಯ ವಾಸ್ತುಶಿಲ್ಪ ಅಧ್ಯಯನ, ರಾಜಕೀಯ ಮತ್ತು ಸಾಂಸ್ಕøತಿಕ ಇತಿಹಾಸ ಅಧ್ಯಯನ, ಬುಡಕಟ್ಟು ಸಂಸ್ಕøತಿ ಹಾಗೂ ಚಿತ್ರದುರ್ಗ ಜಿಲ್ಲೆಯ ಪಾಳೆಯಗಾರರ ಇತಿಹಾಸ ಕುರಿತು ನಡೆಸಿರುವ ಅಧ್ಯಯನ, ಇತಿಹಾಸ ಸ್ಮಾರಕಗಳ ಬಗ್ಗೆ ಜಾಗೃತಿ ಹಾಗೂ ಹೋರಾಟ, ರೇಣುಕಾ ಪ್ರಕಾಶನ ಸಂಸ್ಥೆಯ ಸ್ಥಾಪನೆ ಹಾಗೂ ಅನೇಕ ಇತಿಹಾಸ ಸಂಶೋಧನ ಕೃತಿಗಳ ಪ್ರಕಟಣೆ, ಇತಿಹಾಸ ವೇದಿಕೆಯ ಸಂಚಾಲಕರಾಗಿ ಸುಮಾರು 40 ಉಪನ್ಯಾಸ ಕಾರ್ಯಕ್ರಮಗಳ ಆಯೋಜನೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಇತಿಹಾಸ ಕುರಿತು ಸಂಶೋಧನಾ ಪ್ರಬಂಧಗಳ ಮಂಡನೆ ಮೂಲಕ ಡಾ.ಮಹಾಂತೇಶ್ ಅಪಾರ ಸಾಧನೆ ಮಾಡಿದ್ದಾರೆ.
ನಿವೃತ್ತ ಇಂಜಿನಿಯರ್ ಟಿ.ಆರ್.ರುದ್ರಪ್ಪ:
ಚಿತ್ರದುರ್ಗ ಕೆಳಗೋಟೆ ಮೂಲದ ಟಿ.ಆರ್.ರುದ್ರಪ್ಪ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮುಖ್ಯ ಇಂಜಿನಿಯರ್ ಆಗಿ ರಾಜ್ಯದ ಹಲವೆಡೆ ಕಾರ್ಯನಿರ್ವಹಿಸಿದ್ದಾರೆ.
ವಾಲ್ಮೀಕಿ ಸಮಾಜದ ಒಡನಾಡಿಯಾಗಿ, ಸರ್ಕಾರಿ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲೂ ಸದಾ ಮುಂದಿರುತ್ತಿದ್ದ ರುದ್ರಪ್ಪ ಅವರಿಗೆ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸಂದಿದೆ.