ತಾಲೂಕು
ಪ್ರೀತಿಸಿ, ಮದುವೆಯಾದ ಯುವಜೋಡಿ | ರಕ್ಷಣೆ ಕೋರಿ ಎಸ್ಪಿಗೆ ಮನವಿ
ಚಿತ್ರದುರ್ಗ ನ್ಯೂಸ್.ಕಾಂ: ನಾಲ್ಕು ವರ್ಷಗಳ ಪ್ರೀತಿಗೆ ತಡೆಗೋಡೆ ಕಟ್ಟಲು ಮುಂದಾದ ಪೋಷಕರ ವಿರುದ್ಧ ಯುವ ಜೋಡಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗುರುವಾರ ಚಿತ್ರದುರ್ಗದಲ್ಲಿ ನಡೆಯಿತು.
ಎಂಎಸ್ಸಿ ಓದುತ್ತಿರುವ ಮೊಳಕಾಲ್ಮೂರು ತಾಲೂಕಿನ ಹರ್ಷಿತಾ, ಐಟಿಐ ಓದಿ ವ್ಯವಹಾರ ಮಾಡಿಕೊಂಡಿರುವ ಬಿ.ಜಿ.ಕೆರೆಯ ಹರೀಶ್ ಜೋಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಪೋಷಕರ ವಿರೋಧದ ಮಧ್ಯೆಯೇ ಮನೆ ಬಿಟ್ಟು ಬಂದು ಮದುವೆಯಾಗಿದ್ದಾರೆ.
ಯುವಕ ಹಾಗೂ ಯುವತಿ ಬೇರೆ ಬೇರೆ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೆ ಎರಡೂ ಕಡೆಯ ಪೋಷಕರ ಕಡೆಯಿಂದ ಈ ಪ್ರೀತಿ ಮತ್ತು ಮದುವೆಗೆ ವಿರೋಧ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ನಂತರವೂ, ಬೇರೆ ಮಾಡಲು ಯತ್ನಿಸಿದ ಕಾರಣಕ್ಕೆ ಪೊಲೀಸರಿಂದ ರಕ್ಷಣೆ ಬಯಸಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ
ನಾಯಕ ಸಮುದಾಯದ ಹರೀಶ್ ಹಾಗೂ ಕುರುಬ ಸಮುದಾಯದ ಹರ್ಷಿತಾ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರೇಮಾಂಕುರವಾಗಿದೆ. ಮದುವೆಗೆ ಎರಡೂ ಮನೆಯ ಪೋಷಕರು ಒಪ್ಪಿಲ್ಲ. ಬೇರೆ ಮದುವೆ ಮಾಡಲು ಪ್ರಯತ್ನ ಆರಂಭಿಸಿದ ಕಾರಣಕ್ಕೆ ಮನೆ ಬಿಟ್ಟು ಬಂದು ಚಿತ್ರದುರ್ಗದ ಹೊರವಲಯದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.
ಮದುವೆಯ ಬಳಿಕವೂ, ಯುವತಿಯ ಮನೆಯವರು ಬೇರ್ಪಡಿಸುವ ಪ್ರಯತ್ನದಲ್ಲಿದ್ದರು. ಇಬ್ಬರಿಗೂ ಜೀವಬೆದರಿಕೆಯನ್ನೂ ಹಾಕಿದ ಕಾರಣಕ್ಕೆ, ರಕ್ಷಣೆ ಕೋರಿ ಗುರುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಯುವ ಜೋಡಿಯ ಮನವಿ ಆಲಿಸಿದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.
ಇನ್ನೂ ಯುವತಿ ಹರ್ಷಿತಾ ಪೋಷಕರ ಕಡೆಯಿಂದ ಬೇದರಿಕೆಯಿದ್ದು ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠರಿಗೆ ಪತ್ರ ಬರೆದು ಓದಿರುವ ವೀಡಿಯೋ ಕೂಡಾ ವೈರಲ್ ಆಗಿದೆ.