ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ | ಎಬಿವಿಪಿಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ- ಡಾ.ಎಂ.ಎನ್.ರವಿ ಮಂಡ್ಯ
ಚಿತ್ರದುರ್ಗ ನ್ಯೂಸ್.ಕಾಂ: ಎಪ್ಪತ್ತೈದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಎಬಿವಿಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳ್ತಂಗಡಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ.ಎಂ.ಎನ್.ರವಿ ಮಂಡ್ಯ ಹೇಳಿದರು.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.
ನಮ್ಮ ದೇಶಕ್ಕೆ ಬಂದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ಧಾರಿ ಯುವಕರ ಮೇಲಿದೆ. ಹಾಗಾಗಿ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಇಡೀ ರಾಷ್ಟ್ರ ಆಧುನಿಕ ಭಾರತವಾಗಬೇಕು. ದೇಶ ಸಮೃದ್ಧವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸನ್ನದ್ದರಾಗಬೇಕು ಎಂದರು.
ಇದನ್ನೂ ಓದಿ: ಸೌಭಾಗ್ಯ-ಬಸವರಾಜನ್ ವಿರುದ್ಧದ ಪಿತೂರಿ ಪ್ರಕರಣ ರದ್ದು
ಎಬಿವಿಪಿ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಸತತ ಹೋರಾಟ ನಡೆಸುತ್ತಾ ಬಂದಿದೆ. ರಾಷ್ಟ್ರ, ಸಮಾಜ, ಸಂಸ್ಕøತಿಗೆ ಧಕ್ಕೆ ಬಂದಾಗ ಸಿಡಿದು ನಿಂತಿದೆ. ಮೆಕಾಲೆ ಶಿಕ್ಷಣ ನೀತಿ ಬದಲಾಯಿಸಿ, ಈ ಮಣ್ಣಿನ ಶಿಕ್ಷಣವನ್ನು ಜಾರಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಿದೆ. ಕಾಶ್ಮೀರದ ಲಾಲ್‍ಚೌಕ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳು ಸಾಹಸ ಮಾಡಿದ್ದಾರೆ. ಬಾಂಗ್ಲಾ ದೇಶದಿಂದ ಬರುವ ನುಸುಳುಕೋರರನ್ನು ತಡೆಯುವಲ್ಲಿ ಎಬಿವಿಪಿ ಅಗ್ರಗಣ್ಯ ಹೋರಾಟ ನಡೆಸಿದೆ ಎಂದು ವಿವರಿಸಿದರು.
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಜೆಎನ್‍ಯು ವಿಶ್ವವಿದ್ಯಾನಿಲಯದಲ್ಲಿದ್ದ ತುಕಡೆ ಗ್ಯಾಂಗ್ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧಿಟ್ಟ ಹೋರಾಟ ನಡೆಸಿದ್ದಾರೆ. ಕಮ್ಯುನಿಸ್ಟ್, ಮಾವೋವಾದಿಗಳ ಕಪಿಮುಷ್ಠಿಯಲ್ಲಿದ್ದ ಜೆಎನ್‍ಯು ವಿಶ್ವವಿದ್ಯಾನಿಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಎಬಿವಿಪಿ ಯಶಸ್ವಿಯಾಗಿದೆ ಎಂದು ರವಿ ಮಂಡ್ಯ ತಿಳಿಸಿದರು.
ಪ್ರಕೃತಿ ವಿಕೋಪ, ನೆರೆ ಮತ್ತಿತರೆ ಸಂದರ್ಭಗಳಲ್ಲಿ ಅನೇಕ ಎಬಿವಿಪಿ ಕಾರ್ಯಕರ್ತರು ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ. ಹಾಸ್ಟೆಲ್‍ಗಳ ಸಮಸ್ಯೆ, ಬಸ್‍ಪಾಸ್ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿ ಪರಿಷತ್ ಹೋರಾಟ ನಡೆಸುತ್ತಾ ಬಂದಿದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಯುವಶಕ್ತಿ ದೇಶದ ಸಂಪತ್ತು. ಹಾಗಾಗಿ ಯುವಜನರು ನಿಶ್ಚಿತ ಗುರಿ, ದೃಷ್ಠಿಕೋನ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ದಾರಿ ತಪ್ಪಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲ. ನಿಖರವಾದ ಗೊತ್ತು, ಗುರಿ ಇಲ್ಲ. ದೇಶಭಕ್ತಿ, ಭಾಷಾಭಿಮಾನ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಆರೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಜನತೆ ಮುಂದಾಗಬೇಕು. ನಿಜವಾದ ಭಾರತೀಯ ವ್ಯಕ್ತಿತ್ವ ನಿಮ್ಮಲ್ಲಿ ಮೂಡಿಬರಬೇಕು ಎಂದು ತಿಳಿಹೇಳಿದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಯುವಜೋಡಿ | ರಕ್ಷಣೆ ಕೋರಿ ಎಸ್ಪಿಗೆ ಮನವಿ
ನಮ್ಮ ದೇಶದ ಪರಂಪರೆ, ಸಂಸ್ಕøತಿಯನ್ನು ಗೌರವಿಸುವ ಕೆಲಸವಾಗಬೇಕು. ಇತಿಹಾಸ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು. ನಮ್ಮ ದೇಶದಲ್ಲಿ ಅನೇಕ ಆದರ್ಶ ವ್ಯಕ್ತಿಗಳು, ಹೋರಾಟಗಾರರು, ಸಮಾಜ ಸುಧಾರಕರು ಬಂದು ಹೋಗಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ನಾಗರೀಕರಾಗಬೇಕು ಎಂದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ ಮಾತನಾಡಿ, ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯಕಾರಿಣಿ ಬಹುಮುಖ್ಯ ಅಂಶ. ಹಾಗಾಗಿ ಇಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಾಗುವುದು. ಸಂಘಟನಾತ್ಮಕ, ಕಾರ್ಯಾತ್ಮಕ ಚಟುವಟಿಕೆಗಳಲ್ಲಿ ಸ್ಪಷ್ಟತೆ ಇರಬೇಕು. ಅಂತಹ ಕಾರ್ಯ ಇಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿ ಎಂದರು.
ವೇದಿಕೆಯಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ವರ ಇದ್ದರು. ಎಬಿವಿಪಿ ಹಿರಿಯ ಕಾರ್ಯಕರ್ತರಾದ ಡಾ.ಕೆ.ರಾಜೀವಲೋಚನ, ಜಿ.ಎಂ.ಪವನ್, ಕಿರಣ್ ಕುಂದಾಪುರ, ಧನಂಜಯ, ಜಿಲ್ಲಾ ಪ್ರಮುಖ್ ಡಾ.ಎಸ್.ಆರ್.ಲೇಪಾಕ್ಷ, ನಗರ ಅಧ್ಯಕ್ಷ ಡಾ.ರವಿ, ಇ.ಗಂಗಾಧರ್, ಚಂದ್ರಶೇಖರ್, ಡಾ.ವೆಂಕಟೇಶ್ ಬಾಬು ಸೇರಿದಂತೆ ಅನೇಕರು ಭಾಗವಹಿಸಿದ್ದರು.