ಮುಖ್ಯ ಸುದ್ದಿ
ಮಾರ್ಚ್ 16 | ನಾಯಕನಹಟ್ಟಿ ಜಾತ್ರೆ | ಅಗತ್ಯ ಸಿದ್ಧತೆಗೆ ಸಚಿವ ಸುಧಾಕರ್ ಸೂಚನೆ

CHITRADURGA NEWS | 17 FEBRUARY 2025
ಚಿತ್ರದುರ್ಗ: ಶ್ರೀಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Also Read: Kannada Novel: 20. ಕಾಮಜ್ಜ ಒಡ್ಡು ಕಟ್ಟಿದ

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ಜಾತ್ರೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಒಂದು ವಾರದೊಳಗೆ ಐದು ಕೊಳವೆಬಾವಿಗಳನ್ನು ಕೊರೆಯಿಸಿ, ಸಮರ್ಪಕವಾಗಿ ಕುಡಿಯವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯು ವ್ಯವಸ್ಥಿತವಾಗಿ, ಸುಸೂತ್ರವಾಗಿ ನಡೆಯಬೇಕು ಎಂದು ಹೇಳಿದರು.
ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವು 2025ರ ಮಾರ್ಚ್ 09 ರಿಂದ ಮಾರ್ಚ್ 24 ರವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವವು ಮಾರ್ಚ್ 16ರಂದು ಭಾನುವಾರ ನಿಗಧಿಯಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಲಭ್ಯಗಳ ಕೊರತೆ ಎದುರಾಗಬಾರದು. ಕುಡಿಯುವ ನೀರು, ರಸ್ತೆ, ಆರೋಗ್ಯ, ನೈರ್ಮಲ್ಯ ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Also Read: ರಾತ್ರಿ ಸಿಂಗಲ್ ಫೇಸ್ ಕರೆಂಟ್ | ಕೃಷಿ ಪಂಪ್ ಸೆಟ್ ಬಳಸದಂತೆ ಬೆಸ್ಕಾಂ ಮನವಿ
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮತನಾಡಿ, ನಾಯಕನಹಟ್ಟಿ ಜಾತ್ರಾ ಮಹೋತ್ಸವಕ್ಕೆ ಸುಮಾರು 3ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಉಪಸಮಿತಿಗಳನ್ನು ರಚನೆ ಮಾಡಲಾಗುವುದು.
ಕಳೆದ ವರ್ಷದ ಸಣ್ಣಪುಟ್ಟ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಂಡು ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ ಅವರು, ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು ಎಂದು ಹೇಳಿದರು. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ, ನೈರ್ಮಲೀಕರಣ ಸಮಿತಿ ರಚನೆ ಮಾಡಿ, ಜಾತ್ರೆಯಲ್ಲಿ ತಾತ್ಕಾಲಿಕ ಅರೋಗ್ಯ ಕೇಂದ್ರಗಳ ಸ್ಥಾಪನೆ, ಅಂಬುಲೆನ್ಸ್, ಔಷಧೋಪಚಾರದ ವ್ಯವಸ್ಥೆ ಸೇರಿದಂತೆ ಸಾರ್ವಜನಿಕರ ಆರೋಗ್ಯ ಕಾಡಾಪಲು ತಾತ್ಕಾಲಿಕವಾಗಿ ವೈದ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಜಾತ್ರೆಗೆ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದಲೂ ಭಕ್ತಾದಿಗಳು ನಾಯಕನಹಟ್ಟಿಗೆ ಬರುವುದರಿಂದ, ಕೆಎಸ್ಆರ್ಟಿಸಿ ವತಿಯಿಂದ ವಿಶೇಷ ಬಸ್ ಸೌಲಭ್ಯ ಒದಗಿಸಬೇಕು. ಬಸ್ ತಂಗುದಾಣ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿರಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಶಾಂತಿ ಮತ್ತು ಸುವ್ಯವಸ್ಥೆ ಸಮಿತಿಯು ಜಾತ್ರೆಯಲ್ಲಿ ಬಂದೋಬಸ್ತ್ ವ್ಯವಸ್ಥೆಗೆ ಕ್ರಮವಹಿಸಬೇಕು. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ಬಂದೋಬಸ್ತ್ಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಸೌಲಭ್ಯ ಕಲ್ಪಿಸಬೇಕು. ವಿದ್ಯುತ್ ಸಮಸ್ಯೆ ಹಾಗೂ ವಿದ್ಯುತ್ ಅವಘಡಗಳು ಆಗದಂತೆ ಬೆಸ್ಕಾಂ ಅಧಿಕಾರಿಗಳು ಕ್ರಮವಹಿಸಬೇಕು.
Also Read: ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
ಜಾನುವಾರುಗಳ ರಕ್ಷಣೆ ಹಾಗೂ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಿದ್ದು, ಈ ಕುರಿತು ಪಶುಸಂಗೋಪನೆ ಅಧಿಕಾರಿಗಳು ಸೂಕ್ತ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆಗಳು ಜಾತ್ರೆ ಆರಂಭವಾಗುವ 15 ದಿನದೊಳಗೆ ಜಾತ್ರೆಯ ಎಲ್ಲ ಮೂಲಭೂತ ಸೌಕರ್ಯಗಳ ಸಿದ್ಧತೆ ವ್ಯವಸ್ಥೆ ಮುಕ್ತಾಯವಾಗಬೇಕು. ಕೇವಲ ಜಾತ್ರೆಗೆ ಮಾತ್ರ ಸೀಮಿತವಾಗದೇ ಶಾಶ್ವತ ಹಾಗೂ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರವಸೂಲಿಗೆ ಸಮಿತಿ ರಚನೆ :
ಕಳೆದ ಬಾರಿ ತೀವ್ರ ಬರ ಪರಿಸ್ಥಿತಿ ಇದ್ದ ಕಾರಣ, ಜಾತ್ರೆ ಸಂದರ್ಭದಲ್ಲಿ ಕರ ವಸೂಲಿ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಾರಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯಲ್ಲಿ ಕರ ವಸೂಲಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲು ಸಮಿತಿ ರಚನೆ ಮಾಡಿ, ಸಮಿತಿ ನೀಡುವ ವರದಿಯ ಆಧಾರದಲ್ಲಿ ಕರವಸೂಲಿಗೆ ದರ ನಿಗದಿಪಡಿಸಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಟೇಶ್ ತಿಳಿಸಿದರು.
Also Read: ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ | ಗೋವಿಂದ ಕಾರಜೋಳ
ಅಕ್ರಮವಾಗಿ ಬೇರೆ ಯಾರಾದರೂ ಕಂದಾಯ ವಸೂಲಾತಿ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ನಾಯಕನಹಟ್ಟಿ ಜಾತ್ರಾ ಮಹೋತ್ಸವಕ್ಕೆ ಶಾಸಕರ ಅನುದಾನದಿಂದ ರೂ.10 ಲಕ್ಷ ಅನುದಾನ ನೀಡಲಾಗುವುದು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ನಾಯಕನಹಟ್ಟಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಗುಂಡಿ ಮುಚ್ಚಿಸಿ, ರಸ್ತೆ ದುರಸ್ಥಿಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಚಳ್ಳಕೆರೆ ಕ್ಷೇತ್ರದ ಅನುದಾನದಲ್ಲಿ ರೂ.10 ಲಕ್ಷ ನಾಯಕನಹಟ್ಟಿ ಜಾತ್ರೆಗೆ ನೀಡಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
Also Read: ಚಳ್ಳಕೆರೆ – ಚಿತ್ರದುರ್ಗ, ಹಿರಿಯೂರು – ಹೊಸದುರ್ಗ ರಸ್ತೆ ಅಭಿವೃದ್ಧಿಗೆ ಅನುದಾನ | ಸಂಸದ ಗೋವಿಂದ ಕಾರಜೋಳ
ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗದಂತೆ ಸ್ನಾನಗೃಹ, ಕೂದಲು ತೆಗೆಸುವಿಕೆ ಸ್ಥಳದಲ್ಲಿ ಸ್ವಚ್ಛತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಜಾತ್ರೆಗಳಲ್ಲಿ ಸರಗಳ್ಳತನ ಸಾಮಾನ್ಯವಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ತಾತ್ಕಾಲಿಕವಾಗಿ ಸಿ.ಸಿ.ಟಿವಿ ಕ್ಯಾಮೆರಾ ವ್ಯವಸ್ಥೆ ಬದಲಾಗಿ ಶಾಶ್ವತವಾಗಿ ಸಿ.ಸಿ.ಟಿವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿವುದು ಉತ್ತಮ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ, ಮಾಜಿ ಅಧ್ಯಕ್ಷ ರವಿಶಂಕರ್, ಎಂ.ವೈ.ಟಿ.ಸ್ವಾಮಿ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
