ಮುಖ್ಯ ಸುದ್ದಿ
ಒಂದು ಲೋಡ್ ಯೂರಿಯಾ ವಶಕ್ಕೆ | 12.74 ಲಕ್ಷ ಮೊತ್ತದ ಗೊಬ್ಬರ ಅಕ್ರಮ ಸಾಗಾಣೆ

CHITRADURGA NEWS | 10 FEBRUARY 2025
ಚಿತ್ರದುರ್ಗ: ಪೊಲೀಸ್ ಹಾಗೂ ಕೃಷಿ ಇಲಾಖೆಯ ಜಾರಿ ದಳದ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ ಒಂದು ಲೋಡ್ ಬೇವು ಲೇಪಿತ ಯೂರಿಯಾ ವಶಕ್ಕೆ ಪಡೆಯಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಿತ್ರದುರ್ಗ-ಹಿರಿಯೂರು ನಡುವೆ ಇರುವ ಗುಯಿಲಾಳು ಟೋಲ್ ಪ್ಲಾಜ್ ಸಮೀಪ ಫೆ.7 ರಂದು ರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: Kannada Novel: 19. ಊರ ಬಾವಿ ತೋಡಿದರು
ಲಾರಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೇ ಬೇವು ಲೇಪಿತ ಯೂರಿಯ ಗೊಬ್ಬರವನ್ನು ಚಿತ್ರದುರ್ಗದ ಕಡೆಯಿಂದ ಬೆಂಗಳೂರು ಕಡೆಗೆ ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಐಮಂಗಲ ಠಾಣೆಯ ಪಿಎಸ್ಐ ಎಂ.ಟಿ.ದೀಪು ಮತ್ತು ಸಿಬ್ಬಂದಿ ಟೋಲ್ ಬಳಿ ಲಾರಿ ತಡೆದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ,
ಪೊಲೀಸರು ಲಾರಿ ಅಡ್ಡಗಟ್ಟಿ ದಾಖಲೆ ಕೇಳಿದಾಗ, ಚಾಲಕ ಮೆಕ್ಕೆಜೋಳ ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದಾನೆ. ದಾಖಲೆಗಳಲ್ಲೂ ಮೆಕ್ಕೆಜೋಳ ಎಂದೇ ಇದೆ. ಆದರೆ, ಲಾರಿಯ ನೊಂದಣಿ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅನುಮಾನ ಬಂದ ಹಿನ್ನಲೆಯಲ್ಲಿ ಲಾರಿಯನ್ನು ಪರಿಶೀಲಿಸಿದಾಗ ರಸಗೊಬ್ಬರ ಪತ್ತೆಯಾಗಿದೆ.
ಇದನ್ನೂ ಓದಿ: ತೊಗರಿಗೆ 8 ಸಾವಿರ ನಿಗಧಿ | ಚಿತ್ರದುರ್ಗದಲ್ಲೂ ಖರೀಧಿ
ಯೂರಿಯಾ ಗೊಬ್ಬರವನ್ನು ಗಂಗಾವತಿಯಿಂದ ಕೇರಳಾಗೆ ಸಾಗಾಣೆ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಲಾರಿಯಲ್ಲಿದ್ದ ಪೂರ್ತಿ ಗೊಬ್ಬರ ಚೀಲಗಳನ್ನು ಕೆಳಗೆ ಇಳಿಸಿ ಲೆಕ್ಕ ಹಾಕಿದಾಗ 12.74 ಲಕ್ಷ ರೂ. ಮೌಲ್ಯದ 660 ಚೀಲಗಳಲ್ಲಿ ಯೂರಿಯಾ ಪತ್ತೆಯಾಗಿದೆ.
ಕೃಷಿ ಇಲಾಖೆಯ ಜಾರಿದಳದ ಸಹಾಯಕ ಕೃಷಿ ನಿರ್ದೇಶಕರಾದ ಜೆ.ಉಲ್ಬತ್ಜೈಬಾ, ಸಂಕಾಳ ಮಲ್ಲನಗೌಡ ಪರಿಶೀಲಿಸಿ ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನೇ ಹತ್ಯೆ ಮಾಡಿದ ಪತಿ | ಮೆದೇಹಳ್ಳಿಯಲ್ಲಿ ಘಟನೆ
ರೈತರಿಗೆ ಗೊಬ್ಬರದ ಕೃತಕ ಅಭಾವ ಸೃಷ್ಠಿಸಿ ಹಾಗೂ ಸರ್ಕಾರಕ್ಕೆ ಸಹಾಯಧನ ವಂಚನೆ ಮಾಡಿ ಅಕ್ರಮವಾಗಿ ಸಾಗಾಣಿಕೆಯಲ್ಲಿ ತೊಡಗಿದ್ದು, ಹೊರ ರಾಜ್ಯಕ್ಕೆ ಯೂರಿಯ ಸಾಗಾಣೆ ನಿಷೇಧವಿದೆ. ಜೊತೆಗೆ ಕೃಷಿಗೆ ಬಳಕೆ ಮಾಡಬೇಕಾದ ಯೂರಿಯಾವನ್ನು ಕೈಗಾರಿಕೆಗೆ ಸಾಗಾಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆ ಜಾರಿ ದಳದ ಕೃಷಿ ನಿರ್ದೇಶಕರಾದ ಜೆ.ಉಲ್ಬತ್ಜೈಬಾ, ಸಂಕಾಳ ಮಲ್ಲನಗೌಡ, ಐಮಂಗಲ ರೈತ ಸಂಪರ್ಕ ಕೇಂದ್ರದ ಜೆ.ಪವಿತ್ರ, ಜಿಲ್ಲಾ ಎನ್ಎಫ್ಎಸ್ಎಂ ಸಂಯೋಜನಾಧಿಕಾರಿ ತಿಪ್ಪೇಸ್ವಾಮಿ, ವಾಹನ ಚಾಲಕ ಸೀತಾರಾಮರೆಡ್ಡಿ, ರಂಗನಾಥ್.ಕೆ, ಐಮಂಗಲ ಪೊಲೀಸ್ ಠಾಣೆಯ ಪಿಎಸ್ಐ ಎಂ.ಟಿ.ದೀಪು, ಎಎಸ್ಐ ಮಹಮ್ಮದ್ ಇಮಾಮ್ ಹುಸೇನ್, ಸಿಬ್ಬಂದಿ ಜಯರಾಂ, ರವಿ ಇದ್ದರು.
