ಮುಖ್ಯ ಸುದ್ದಿ
ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
CHITRADURGA NEWS | 22 JANUARY 2025
ಚಿತ್ರದುರ್ಗ: ಒಂದು ಉತ್ತಮ ಪ್ರವಾಸಿ ತಾಣವಾಗಬೇಕಿದ್ದ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆಯನ್ನು ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು (ಸುಮೋಟೊ) ದಾಖಲಿಸುತ್ತೇನೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದ್ದಾರೆ.
ಬುಧವಾರ ಬೆಳ್ಳಂ ಬೆಳಗ್ಗೆ ಮಲ್ಲಾಪುರ ಕೆರೆ ವೀಕ್ಷಣೆಗೆ ಆಗಮಿಸಿದ ನ್ಯಾಯಮೂರ್ತಿಗಳು, ಎರಡು ತಿಂಗಳ ಒಳಗಾಗಿ ಕೆರೆ ಅಭಿವೃದ್ಧಿಯಾಗದಿದ್ದರೆ ಸಂಬಂದ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮೈಸೂರು ಮಹಾರಾಜರಿಂದ ವಾಣಿವಿಲಾಸ ಸಾಗರಕ್ಕೆ ಬಾಗೀನ ಅರ್ಪಣೆ
ಕೆರೆ ಪರಿಶೀಲನೆಗಾಗಿ ಬಂದಿದ್ದೇನೆ ಎಂದು ಅಧಿಕಾರಿಗಳು ಬೇಗೆ ಸಮಸ್ಯೆ ಪರಿಹರಿಸುವುದಾಗಿ ಬುರುಡೆ ಬಿಡುವುದು ಬೇಡ. ಕೆರೆ ಅಭಿವೃದ್ಧಿಗೆ ಬೇಕಾದಷ್ಟು ಸಮಯವನ್ನು ತಗೆದುಕೊಂಡು, ಸರಿಯಾಗಿ ಕೆಲಸ ನಿರ್ವಹಿಸಿ, ಒಂದು ವೇಳೆ ಕೆಲಸ ಮಾಡದಿದ್ದರೇ, ನಾನು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಗುಡುಗಿದರು.
ಕೆರೆ ಸಾರ್ವಜನಿಕರ ಆಸ್ತಿ. ಕೂಡಲೇ ಸ್ವಚ್ಛಗೊಳಿಸಿ ಅದರ ಪೆÇೀಟೋ ಹಾಗೂ ವಿಡಿಯೋದೊಂದಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆ ಒತ್ತುವರಿಗೆ ತೆರವಿಗೆ ನಿರ್ದೇಶನ:
ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಮಲ್ಲಾಪುರ ಕೆರೆ ಜಂಟಿ ಸಮೀಕ್ಷೆ ಕಾರ್ಯಕೈಗೊಳ್ಳಬೇಕು. ಒತ್ತುವರಿಯಾಗಿದ್ದರೆ, ಕೆರೆಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತವರಿಗೆ ಕಾನೂನಿನ ಪ್ರಕಾರ ನೋಟಿಸ್ ಹಾಗೂ ಕಾಲವಕಾಶ ನೀಡಿ ಒತ್ತುವರಿ ತೆರವುಗೊಳಿಸುವಂತೆ ನ್ಯಾ.ಫಣೀಂದ್ರ ನಿರ್ದೇಶನ ನೀಡಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ ಜ.23 ರಂದು ಸಿಎಂ, ಡಿಸಿಎಂ | ವಿವಿ ಸಾಗರಕ್ಕೆ ಬಾಗಿನ ಸಮರ್ಪಣೆ
ಈಗಾಗಲೇ ಗುರುತಿಸಿರುವ ಒತ್ತುವರಿಯನ್ನು ತೆರವುಗೊಳಿಸಿ ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಕೆರೆ ಸುತ್ತಲೂ ಮಣ್ಣಿನ ಏರಿ ಹಾಕಿ, ಪುಟ್ ಪಾತ್ ನಿರ್ಮಿಸಬೇಕು.
ಐತಿಹಾಸಿಕ ತಾಣವಾಗಿರುವ ಚಿತ್ರದುರ್ಗದಲ್ಲಿ ಇಲ್ಲಿಯೂ ಕೂಡ ಪ್ರವಾಸಿ ತಾಣ ಮಾಡಲು ಉತ್ತಮ ಅವಕಾಶವಿದೆ ಎಂದರು.
ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಕಲುಷಿತ ನೀರನ್ನು ಸ್ವಚ್ಛಗೊಳಿಸಿ ಕೆರೆಗೆ ಬಿಡಬೇಕು. ಕೆರೆಯಲ್ಲಿ ಬೆಳೆದಿರುವ ಅಂತರಗಂಗೆಯನ್ನು (ಕಳೆ ಬಳ್ಳಿ) ತೆರವುಗೊಳಿಸಬೇಕು. ಕೆರೆಯ ಹೂಳು ಎತ್ತಿ, ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು. ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಜಲತಜ್ಞರ ಅಭಿಪ್ರಾಯ ಪಡೆದು ನಗರದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.
ಇದನ್ನೂ ಓದಿ: ಸಹಾಯಧನಕ್ಕೆ ಅರ್ಜಿ ಆಹ್ವಾನ
ಇದೇ ಮಾದರಿಯಲ್ಲಿ ಮಲ್ಲಾಪುರ ಕೆರೆ ಕುರಿತು ಜಲತಜ್ಞರ ವರದಿ ಪಡೆದು ಅಭಿವೃದ್ಧಿಗೆ ಮುಂದಾಗುವಂತೆ ನ್ಯಾ.ಫಣೀಂದ್ರ ಹೇಳಿದರು.
ಕೋಡಿ ನಾಲಾ ಸರಿಪಡಿಸಲು ಸೂಚನೆ:
ಮಲ್ಲಾಪುರ ಕೆರೆ ಸಂಪರ್ಕಿಸುವ ಹಾಗೂ ಕೆರೆಯಿಂದ ಹೊರ ಹೋಗುವ ನಾಲಾ ವ್ಯವಸ್ಥೆಯನ್ನು ಸರಿಪಡಿಸಬೇಕು. ಕೆರೆಯ ಸುತ್ತಮುತ್ತಲಿನ ಶಾಲೆಗಳಿಗೆ ನೀರು ನುಗ್ಗಿ ಮಕ್ಕಳಿಗೆ ತೊಂದರೆಯಾಗಿದೆ.
ಶಾಲಾ ಪಕ್ಕದಲ್ಲಿರುವ ಚರಂಡಿಯನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ ಸೇರಿದಂತೆ ಇತರೆ ಕ್ರಿಮಿಕೀಟಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕೆರೆಯ ಸುತ್ತಲೂ ಸಾರ್ವಜನಿಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆಯ ಏರಿ ಪಕ್ಕದಲ್ಲಿ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಸುರಿಯುವರಿಗೆ ದಂಡ ವಿಧಿಸಬೇಕು.
ದಂಡಕ್ಕೂ ಮಣಿಯದಿದ್ದರೆ, ಪೆÇಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲಿಸಬೇಕು. ಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು. ಕೆರೆ ನೀರು ಶುದ್ಧವಾದರೆ ಅದನ್ನು ರೈತರಿಗೆ ವ್ಯವಸಾಯಕ್ಕೆ ನೀಡಬಹುದು. ಇದರಿಂದ ಸರ್ಕಾರಕ್ಕೆ ಆದಾಯವು ಬರುತ್ತದೆ ಎಂದು ನ್ಯಾ.ಫಣೀಂದ್ರ ತಿಳಿಸಿದರು.
ಎನ್.ಹೆಚ್.13 ನೂತನ ಹೈವೆ ನಿರ್ಮಾಣದ ವೇಳೆ ಮಲ್ಲಾಪುರ ಕೆರೆ ಟೂಬಿನಿಂದ ನೀರು ಹೊರಬಿಡಲು ಕಲ್ಪಿಸಿದ್ದ ನಾಲಾ ವ್ಯವಸ್ಥೆ ಮುಚ್ಚಿ ಹೋಗಿದೆ.
ಇದನ್ನೂ ಓದಿ: ಮೆಕ್ಕೆಜೋಳ ಖರೀದಿಗೆ ಸಮಸ್ಯೆ ಇಲ್ಲ | ಸಮಸ್ಯೆ ಇತ್ಯರ್ಥ
ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ, ಮೊದಲಿನ ಹಾಗೆ ಕೆರೆ ಟೂಬಿನಿಂದ ನೀರು ಹೊರಬಿಡಲು ನಾಲಾ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ವಿವರಿಸಿದರು.
ಈ ವೇಳೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕಾಯುಕ್ತ SP ಎಸ್.ವಾಸುದೇವರಾಮ್, ತಹಶೀಲ್ದಾರ್ ಡಾ.ನಾಗವೇಣಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಂತ ಕುಮಾರ್, ನಗರಸಭೆ ಆಯುಕ್ತೆ ರೇಣುಕಾ.ಎಂ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.