ಮುಖ್ಯ ಸುದ್ದಿ
Folk Academy: ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆ | ಎಲಗಟ್ಟೆ ಗೊಲ್ಲರಹಟ್ಟಿ ಸಿರಿಯಮ್ಮ ಆಯ್ಕೆ

CHITRADURGA NEWS | 05 NOVEMBER 2024
ಚಿತ್ರದುರ್ಗ: ಕರ್ನಾಟಕ ಜಾನಪದ ಅಕಾಡೆಮಿ (karnataka Folk Academy)ಯ 2023-24 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಚಳ್ಳಕೆರೆ ತಾಲೂಕು ಯಲಗಟ್ಟೆ ಗೊಲ್ಲರಹಟ್ಟಿಯ 80 ವರ್ಷದ ಸಿರಿಯಮ್ಮ ಭಾಜನರಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: Library: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ | ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು
ಯಲಗಟ್ಟೆ ಗೊಲ್ಲರಹಟ್ಟಿಯ ಚಿಕ್ಕಣ್ಣ ಅವರ ಪತ್ನಿ ಸಿರಿಯಮ್ಮ ಅನಕ್ಷರಸ್ಥೆಯಾಗಿದ್ದರೂ, ಸಾವಿರಾರು ಪದಗಳ ಒಡತಿ. ಕಾಡುಗೊಲ್ಲರ ಸಂಪ್ರದಾಯದಲ್ಲಿ ತಲತಲಾಂತರದಿಂದ ಬಂದಿರುವ ಪಾರಂಪರಿಕ ಪದ ಸಾಹಿತ್ಯವಾದ ಸೋಬಾನೆ ಪದಗಳು, ಕೋಲು ಪದಗಳು, ಗಗ್ಗರ ಪದಗಳು, ಈರುಗಾರರ ಕಥನಗಳು, ಗಣೆ ಕಾವ್ಯಗಳನ್ನು ಸರಾಗವಾಗಿ ಹಾಡುವ ಮೂಲಕ ಸಿರಿಯಮ್ಮ ಮುಂದಿನ ಪೀಳಿಗೆಗೆ ಈ ಸಂಪತ್ತನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ.
ಕುರಿ ಸಾಕಣೆ ಹಾಗೂ ಕೃಷಿ ಚಟುವಟಿಕೆಯ ನಡುವೆಯೂ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ನಾಯಕರಾದ ಎತ್ತಪ್ಪ ಜುಂಜಪ್ಪ ಕ್ಯಾತಪ್ಪ ಮಹಾಕಾವ್ಯಗಳನ್ನೂ ‘ಸಿರಿಯಣ್ಣ’ ಎಂಬ ಕಥನ ಕಾವ್ಯವನ್ನು ಹಾಗೂ ಸೋಬಾನೆ ಪದಗಳನ್ನು ಲೀಲಾಜಾಲವಾಗಿ ಹಾಡುವ ಮೂಲಕ ಜಾನಪದ ಅಕಾಡೆಮಿಯ ಮಹಾಕಾವ್ಯ ವಿಭಾಗದಲ್ಲಿ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: Dina Bhavishya: ದಿನ ಭವಿಷ್ಯ | ನವೆಂಬರ್ 05 | ಆರ್ಥಿಕ ಅಭಿವೃದ್ಧಿ, ವಾಹನ ಖರೀದಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ
ತನ್ನ ಅಜ್ಜಿ ಹಾಗು ತಾಯಿಯಿಂದ ಪದಗಳನ್ನು ಕಲಿತು ಚಿಕ್ಕ ವಯಸ್ಸಿನಿಂದಲೇ ಹಾಡಲು ಆರಂಭಿಸಿದ ಸಿರಿಯಮ್ಮ ಜಾನಪದ ಸರಸ್ವತಿ, ಜಾನಪದ ಕಣಜ ಎಂದೇ ಖ್ಯಾತಿ ಪಡೆದಿದ್ದಾರೆ.
ನಾಡೋಜ ಸಿರಿಯಜ್ಜಿಯ ಜೊತೆಗೆ ಒಡನಾಟ ಹೊಂದಿದ್ದ ಸಿರಿಯಮ್ಮ ಹೆಸರಾಂತ ಸಾಹಿತಿಗಳಾದ ಡಾ.ಎ.ಕೆ.ರಾಮಾನುಜಂ. ಡಾ.ಎಸ್.ಎಲ್.ಭೈರಪ್ಪ, ಡಾ.ಹೆಚ್.ಎಲ್. ನಾಗೇಗೌಡ, ಡಾ.ಕೃಷ್ಣಮೂರ್ತಿ ಹನೂರು ಮುಂತಾದ ಪ್ರಸಿದ್ಧ ಸಾಹಿತಿಗಳು ಸಿರಿಯಜ್ಜಿಯನ್ನು ಬೇಟಿಮಾಡಲು ಬಂದ ಸಂದರ್ಭಗಳನ್ನು ಸಿರಿಯಮ್ಮ ಮನೋಜ್ಞವಾಗಿ ವಿವರಿಸುತ್ತಾರೆ.
ನಾಡೋಜ ಸಿರಿಯಜ್ಜಿಯ ನಂತರ ಇಂದಿನ ಯುವತಿಯರಿಗೆ ಪದಗಳನ್ನು ಕಲಿಸಿಕೊಡುವ ಮೂಲಕ ತನ್ನ ನಂತರದ ಮುಂದಿನ ಪೀಳಿಗೆಗೆ ಪದಗಳನ್ನು ಹೊತ್ತೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ನವೆಂಬರ್ ಮೊದಲ ವಾರದ ಅಡಿಕೆ ರೇಟ್
ಇವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ 2021 ರಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಸಿರಿಬೆಳಗು’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಸ್ಮರಿಸಿದ್ದಾರೆ.
