ಮುಖ್ಯ ಸುದ್ದಿ
ಭ್ರೂಣಲಿಂಗ ಪತ್ತೆ ಮಾಹಿತಿದಾರರಿಗೆ ₹ 1 ಲಕ್ಷ ಬಹುಮಾನ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್
CHITRADURGA NEWS | 06 JULY 2024
ಚಿತ್ರದುರ್ಗ: ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ರೂ.1 ಲಕ್ಷ ಬಹುಮಾನ ನೀಡುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಪ್ರಕಾರ ಭ್ರೂಣ ಲಿಂಗಪತ್ತೆಯು ಶಿಕ್ಷಾರ್ಹ ಅಪರಾಧವಾಗಿದೆ. ಭ್ರೂಣ ಲಿಂಗ ಪತ್ತೆ ಅಥವಾ ಹೆಣ್ಣು ಭ್ರೂಣ ಹತ್ಯೆ ಕೈಗೊಳ್ಳುವವರ ಬಗೆಗಿನ ಮಾಹಿತಿ ನೀಡುವವರಿಗೆ ₹ 1 ಲಕ್ಷ ಬಹುಮಾನ ನೀಡಲಾಗುವುದು’ ಹೇಳಿದರು.
‘ಹೆಣ್ಣು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡಿ ಯಶಸ್ವಿಗೊಂಡ ಗುಪ್ತಕಾರ್ಯಾಚರಣೆಯ ಮಾಹಿತಿದಾರರಿಗೆ ಬಹುಮಾನವಾಗಿ ನೀಡಲಾಗುತ್ತಿದ್ದ ₹ 50,000 ಮೊತ್ತವು ₹ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಪಿಡಿಒಗಳಿಗೆ ಕುಡಿಯುವ ನೀರು ಪರೀಕ್ಷೆ ಹೊಣೆ | ಜಿಲ್ಲಾ ಪಂಚಾಯಿತಿಯಲ್ಲಿ ತರಬೇತಿ
ಗರ್ಭಿಣಿಯರ ಸ್ಕ್ಯಾನಿಂಗ್ ವೇಳೆ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಕುಟುಂಬ ವರ್ಗ, ಹಾಗೂ ಇತರೆ ಸಹಾಯಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಸ್ಕ್ಯಾನಿಂಗ್ ಯಂತ್ರಕ್ಕೆ ಹೆಚ್ಚುವರಿಯಾಗಿ ಕಂಪ್ಯೂಟರ್ ಮಾನಿಟರ್ ಅಳವಡಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬಗ್ಗೆ ಮಾಹಿತಿ ಫಲಕವನ್ನು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪ್ರದರ್ಶಿಸಬೇಕು. ಈ ಅಂಶಗಳನ್ನು ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳು ಪಾಲಿಸುವಂತೆ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪಿಸಿಪಿಎನ್‍ಡಿಟಿ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಡಾ.ಸತ್ಯನಾರಾಯಣ, ಎಂ.ಉಮೇಶ್, ಕೆ.ಪಿ.ಮೀನಾಕ್ಷಿ ಇದ್ದರು.