ಮುಖ್ಯ ಸುದ್ದಿ
ಪ್ರಭು ಶ್ರೀರಾಮನ ಗುಣದ ಹಾದಿಯಲ್ಲಿ ಸಾಗೋಣ | ರಾಮ ಮಂದಿರದಲ್ಲಿ ರಾಮನವಮಿ ಸಂಭ್ರಮ
CHITRADURGA NEWS | 17 APRIL 2024
ಚಿತ್ರದುರ್ಗ: ನಗರದ ಭೋವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಬುಧವಾರ ರಾಮನವಮಿ ಆಚರಿಸಲಾಯಿತು. ಪೂಜಾ ಕಾರ್ಯದಲ್ಲಿ ಹಿಂದುಳಿದ ದಲಿತ ಮಠಾಧೀಶರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ‘ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ. ಕೆಟ್ಟ ಗುಣಗಳನ್ನು ನಾಶಮಾಡಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
‘ಎಲ್ಲರಲ್ಲೂ ರಾಮನಂತಹ, ರಾವಣನಂತಹ ಗುಣವಿದೆ. ಕೆಟ್ಟ ಅಂಶಗಳನ್ನು ನಾಶಮಾಡಿ ಉತ್ತಮ ಗುಣ ಬೆಳೆಸಿಕೊಂಡರೆ ನಾವು ಕೂಡ ರಾಮನ ಸ್ವಭಾವ ಹೊಂದಬಹುದು. ಬದಲಾಗಿ, ದುಶ್ಚಟ ರೂಢಿಸಿಕೊಂಡರೆ ರಾವಣನಂತೆ ಆಗುತ್ತೇವೆ. ಇಂದಿನಿಂದಲೇ ನಾವು ನಮ್ಮ ಸ್ವಭಾವ ಬದಲಾಯಿಸಿಕೊಳ್ಳೊಣ. ಎಲ್ಲರೂ ಸಭ್ಯರೇ, ಎಲ್ಲರಲ್ಲೂ ಸದ್ಗುಣಗಳಿವೆ, ಅವುಗಳನ್ನು ಅರಿತು, ರೂಢಿಸಿಕೊಂಡು ಮುಂದೆ ಸಾಗೋಣ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಶ್ರೀರಾಮನ ಕೃಪೆಯಿಂದ ಬದಲಾಗಲಿದೆ ಅದೃಷ್ಟ | ಇನ್ಮುಂದೆ ಈ ರಾಶಿಯವರಿಗೆ ಎಲ್ಲವೂ ಶುಭ
ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ರಾಮ ಭಾರತದ ನಂಬಿಕೆ, ರಾಮ ಭಾರತದ ಆಧಾರ, ರಾಮ ಭಾರತದ ಕಲ್ಪನೆ, ರಾಮ ಭಾರತದ ಕಾನೂನು, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಿಷ್ಠೆ, ರಾಮ ಭಾರತದ ಕೀರ್ತಿ, ರಾಮ ಪ್ರಭಾವಿ, ರಾಮ ಪರಿಣಾಮಕಾರಿ, ರಾಮನೇ ನಿಷ್ಠೆ , ರಾಮನೇ ನೀತಿ, ರಾಮ ಶಾಶ್ವತ , ರಾಮ ನಿತ್ಯನಿರಂತರ, ರಾಮನೇ ಭವಿಷ್ಯ, ರಾಮ ಸರ್ವವ್ಯಾಪಿ, ರಾಮನೇ ವಿಶ್ವ, ರಾಮನೇ ವಿಶ್ವಾಸ’ ಎಂದು ಬಣ್ಣಿಸಿದರು.
ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ‘ರಾಮ ತನ್ನ ಸಂಬಂಧಗಳು, ಆಪ್ತರು, ಪ್ರಜೆಗಳು, ಸ್ನೇಹಿತರು ಹಾಗೂ ವಿರೋಧಿಗಳನ್ನೆಲ್ಲಾ ಧರ್ಮದ ದೃಷ್ಟಿಯಿಂದ ನೋಡುತ್ತಿದ್ದ. ತತ್ವ ಪ್ರಧಾನವಾಗಿ ನೋಡುವ ದೃಷ್ಟಿಯ ನಿರ್ಲಿಪ್ತತೆ, ರಾಮನಲ್ಲಿ ಕಾಣಬಹುದು’ ಎಂದರು.
ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ‘ಪ್ರಜೆಗಳ ವರ್ಣನೆಯಲ್ಲಿ ಚಿತ್ರಿಸಲ್ಪಟ್ಟ ರಾಮನ ಗುಣಗಳು, ಸ್ವಯಂ ರಾಮನಲ್ಲಿಯೇ ಇತ್ತು. ಲೋಕ ಒಂದು ವ್ಯಕ್ತಿತ್ವವನ್ನು ನಿರೀಕ್ಷೆ ಮಾಡುತ್ತಿದ್ದಾಗ, ಆ ಎತ್ತರಕ್ಕೆ ಮುಟ್ಟಬೇಕಾದ ಅನಿವಾರ್ಯತೆಯನ್ನು ನಮಗೆ ನಾವು ಹೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ರಾಮ, ಆ ಎತ್ತರವನ್ನು ಏರಲು ಬಳಸಿದ್ದು ಧರ್ಮವೆಂಬ ಏಣಿಯನ್ನು, ನೀತಿಯೆಂಬ ದಾರಿಯನ್ನು. ಈ ಹಾದಿಯನ್ನು ಅನುಸರಿಸಿ ಬಂದಿದ್ದರಿಂದ, ಪ್ರಜೆಗಳು ಬಯಸಿದ ರಾಮ ಸಿದ್ಧನಾದ. ಹೀಗಾಗಿ ಯುಗ ಯುಗಗಳಲ್ಲಿ ವಿರಳವಾಗಿ ಕಾಣುವ, ಒಂದು ವಿಶಿಷ್ಟ ವ್ಯಕ್ತಿತ್ವ ರಾಮನಾಗಿ ನಮಗೆ ಕಂಡಿದೆ’ ಎಂದು ತಿಳಿಸಿದರು.
ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಶಕ್ತಿ ಗುರುಪೀಠದ ಬಸವಪ್ರಸಾದ ಸ್ವಾಮೀಜಿ, ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊರಟಗೆರೆ ಅನ್ನಪೂರ್ಣೇಶ್ವರಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ಬಸವಕಲ್ಯಾಣದ ಸತ್ಯಕ್ಕ ತಾಯಿ, ನಗರಸಭೆ ಸದಸ್ಯ ತಿಮ್ಮಣ್ಣ ಉಪಸ್ಥಿತರಿದ್ದರು.