ಮುಖ್ಯ ಸುದ್ದಿ
24 ಗಂಟೆಯಲ್ಲಿ ಚಳ್ಳಕೆರೆಗೆ ವಿವಿ ಸಾಗರ ನೀರು | ವೇದಾವತಿ ನದಿ ಮೂಲಕ ಆಗಮನ
CHITRADURGA NEWS | 21 MARCH 2024
ಚಿತ್ರದುರ್ಗ: ಬಿಸಿಲು, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಚಳ್ಳಕೆರೆ ತಾಲ್ಲೂಕಿನ ಜನರ ದಾಹ ನೀಗಿಸುವ ಮೂಲಕ ನೆಮ್ಮದಿ ನೀಡಲು ವೇದಾವತಿ ನದಿ ಮೂಲಕ ಬರುತ್ತಿದೆ ವಾಣಿ ವಿಲಾಸ ಸಾಗರದ ನೀರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಯ ಮೂಲಕ ಚಳ್ಳಕೆರೆ ತಾಲ್ಲೂಕಿಗೆ ಮಾರ್ಚ್ 22 ರಿಂದ ಪ್ರತಿ ದಿನ 650 ಕ್ಯೂಸೆಕ್‌ನಂತೆ ಬರೋಬ್ಬರಿ ಒಂದೂವರೆ ತಿಂಗಳು ನೀರು ಹರಿಸಲಾಗುತ್ತಿದೆ. ನೀರು ಹರಿಯುವ ಕಾರಣ ವೇದಾವತಿ ನದಿ ದಂಡೆಯ ಎರಡೂ ಭಾಗದ ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮ ತಿಳಿಸಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/housewife-commits-suicide-due-to-creditors/
ವಾಣಿವಿಲಾಸ ಜಲಾಶಯದಿಂದ ಕಾತ್ರಿಕೇನಹಳ್ಳಿ ಅಣೆಕಟ್ಟು ಮೂಲಕ ಲಕ್ಕವ್ವನಹಳ್ಳಿ, ಕಸವನಹಳ್ಳಿ, ಹಳೇಯಳನಾಡು, ಕೂಡ್ಲಹಳ್ಳಿ, ಓಬೇನಹಳ್ಳಿ ಬ್ಯಾರೇಜ್‌ಗಳ ಮೂಲಕ ಚಳ್ಳಕೆರೆ ತಾಲ್ಲೂಕಿಗೆ ನೀರು ತಲುಪುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಗೆ ಆದೇಶಿಸಲಾಗಿದೆ.
ಹಿರಿಯೂರು ತಾಲ್ಲೂಕು ವ್ಯಾಪ್ತಿಗೊಳಪಡುವ ವೇದಾವತಿ ನದಿ ದಡದಲ್ಲಿನ 23 ಹಳ್ಳಿಗಳು ಮತ್ತು ಚಳ್ಳಕೆರೆ ತಾಲ್ಲೂಕಿನ 22 ಹಳ್ಳಿಗಳ ಜನರು ಎಚ್ಚರಿಕೆಯಿಂದ ಇರುವ ಜೊತೆಗೆ ತಮ್ಮ ಜಾನುವಾರುಗಳನ್ನು ಸಂರಕ್ಷಣೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/accused-of-receiving-dowry-5-years-imprisonment/
ಜಲಾಶಯದಲ್ಲಿ ಪ್ರಸ್ತುತ 18.92 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಕುಡಿಯುವ ನೀರಿನ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿಪಾತ್ರದ ಹಳ್ಳಿಗಳಿಗೆ 0.25 ಟಿಎಂಸಿ ಅಡಿ ನೀರು ಹರಿಸಲು ಅನುಮೋದನೆ ನೀಡಲಾಗಿದೆ.
ವೇದಾವತಿ ನದಿಗೆ ನೀರು ಹರಿಸುವುದರಿಂದ ಹಿರಿಯೂರು ತಾಲ್ಲೂಕಿನ ಕಾತ್ರಿಕೇನಹಳ್ಳಿ ಬ್ಯಾರೇಜ್, ಕೂನಿಕೆರೆ, ಲಕ್ಕವ್ವನಹಳ್ಳಿ, ನಂದಿಹಳ್ಳಿ, ಆಲೂರು–ಪಿಟ್ಲಾಲಿ, ಕಸವನಹಳ್ಳಿ, ಹಳೆಯಳನಾಡು, ಕೂಡ್ಲಹಳ್ಳಿ, ತೋರೆಓಬೇನಹಳ್ಳಿ, ಶಿಡ್ಲಯ್ಯನಕೋಟೆ ಬ್ಯಾರೇಜುಗಳು ತುಂಬಿ ಹರಿಯಲಿವೆ. ಸುವರ್ಣಮುಖಿ ನದಿಗೆ ನೀರು ಹರಿಸುವುದರಿಂದ ಕುಂದಲಗೆರೆ, ಸಮುದ್ರದಹಳ್ಳಿ, ಹೂವಿನಹೊಳೆ ಗ್ರಾಮಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ತುಂಬಲಿವೆ.