ಮುಖ್ಯ ಸುದ್ದಿ
ಕರಿಕಂಬಳಿ ಹೊದ್ದ ಕಿಲಾರಿಗಳ ನೃತ್ಯ; ಬುಡಕಟ್ಟು ದೈವ ಬೋಸೆರಂಗಸ್ವಾಮಿ ಜಾತ್ರೆ

ಚಿತ್ರದುರ್ಗ ನ್ಯೂಸ್.ಕಾಂ
ನಾಯಕನಹಟ್ಟಿ ಸಮೀಪದ ಬೋಸೆದೇವರಹಟ್ಟಿ ಗ್ರಾಮದ ಬುಡಕಟ್ಟು ದೈವ ಬೋಸೆರಂಗಸ್ವಾಮಿ ದೇವರ ವಾರ್ಷಿಕ ಜಾತ್ರೆ ಅದ್ದೂರಿಯಾಗಿ ನಡೆಯಿತು. ಮೂರು ದಿನಗಳ ಹಿಂದೆ ಆರಂಭವಾದ ಜಾತ್ರೆ ಭಾನುವಾರ ವೈಭವದ ತೆರೆ ಬಿದ್ದಿತು.
ಸಂಪ್ರದಾಯದಂತೆ ಬುಧವಾರ ಜಾತ್ರೆ ಆರಂಭವಾಯಿತು. ಸಮೀಪದ ಹಿರೆಕೆರೆಯಲ್ಲಿ ಹುಲ್ಲಿನ ಪೌಳಿ ಮಂಟಪ ಪ್ರತಿಷ್ಠಾಪಿಸಿ ದೇವರೆತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರಿಗೆ ಪಂಜಿನ ಸೇವೆ, ಸಜ್ಜೆ, ಗೋಧಿ, ಅಕ್ಕಿಯ ಅರಿಸೇವೆ ಸೇರಿದಂತೆ ಹಲವು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕಿಲಾರಿಗಳಿಗೆ ಉಡುಗೊರೆ ನೀಡಲಾಯಿತು.
ಭಾನುವಾರ ಮುಂಜಾನೆಯಿಂದಲೇ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಹಿರೆಕೆರೆಗೆ ತಂಡೋಪತಂಡವಾಗಿ ತೆರಳಿ ಹಾಡು, ನೃತ್ಯಗಳಿಂದ ಕುಣಿದು ಪುಳಕಿತರಾದರು. ಕರಿಕಂಬಳಿಯ ಹೊದ್ದ ಕಿಲಾರಿಗಳ ನೃತ್ಯದಿಂದ ಶಾಸ್ತ್ರೋಕ್ತವಾಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
4 ಕಿ.ಮೀ ಮೆರವಣಿಗೆಯ ಮೂಲಕ ಗ್ರಾಮವನ್ನು ಪ್ರವೇಶಿಸಿದಾಗ ನೆರೆದ ಭಕ್ತರು ದೇವರಿಗೆ ಬಾಳೆಹಣ್ಣು, ತೆಂಗಿನಕಾಯಿ, ಚೂರುಬೆಲ್ಲ, ಮೆಣಸು ಅರ್ಪಿಸಿದರು. ಸಂಜೆ ದೇವರನ್ನು ಗುಡಿದುಂಬಿಸಲಾಯಿತು. ಜಾತ್ರೆಗೆ ಬೋಸೆದೇವರಹಟ್ಟಿ, ಹಾಯ್ಕಲ್, ಬೆಳಗಟ್ಟ, ಕಡಬನಕಟ್ಟೆ, ಹೊಸಪೇಟೆ, ಕಮಲಪುರ ಸೇರಿದಂತೆ ಹಲವು ಗ್ರಾಮಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದರು.
ಸಂಜೆ ದೇವರನ್ನು ಭವ್ಯ ಮೆರವಣಿಗೆಯೊಂದಿಗೆ ಗುಡಿದುಂಬಿಸುವ ಮೂಲಕ ಬುಡಕಟ್ಟು ಜಾತ್ರೆಗೆ ತೆರೆ ಎಳೆಯಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ಓಬಯ್ಯ, ಬೋಸಮ್ಮ, ಗ್ರಾಮಸ್ಥರಾದ ಡಿ.ಬಿ.ಬೋರಯ್ಯ, ಪಿ.ಬಿ.ತಿಪ್ಪೇಸ್ವಾಮಿ, ಜಿ.ಬಿ.ಮುದಿಯಪ್ಪ ಪಾಲ್ಗೊಂಡಿದ್ದರು.
