Connect with us

    ಡೆತ್‍ನೋಟ್ ರಹಸ್ಯ | ಐವರ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

    ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ

    ಮುಖ್ಯ ಸುದ್ದಿ

    ಡೆತ್‍ನೋಟ್ ರಹಸ್ಯ | ಐವರ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

    ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪದ ಹಳೇ ಬೆಂಗಳೂರು ರಸ್ತೆಯಲ್ಲಿರುವ ಮನೆಯಲ್ಲಿ ಐದು ಜನರ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.

    ಜಗನ್ನಾಥ ರೆಡ್ಡಿ ಕುಟುಂಬದ ಐದು ಜನ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಆತ್ಮಹತ್ಯೆಗೆ ಕಾರಣಗಳು ಏನಿರಬಹುದು ಎನ್ನುವ ಲೆಕ್ಕಾಚಾರಗಳು ಶುರುವಾಗಿದ್ದವು.

    ಜಗನ್ನಾಥ ರೆಡ್ಡಿ ಅವರ ಮನೆಯಲ್ಲಿ ಪೊಲೀಸರು ತಲಾಶ್ ನಡೆಸುವ ವೇಳೆ 2019ರಲ್ಲಿ ಬರೆದಿಟ್ಟಿರುವ ಡೆತ್‍ನೋಟ್ ಪತ್ತೆಯಾಗಿದೆ ಎನ್ನಲಾಗುತ್ತಿದೆ.

    ಡೆತ್‍ನೋಟ್‍ನಲ್ಲಿ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇಬ್ಬರು ಹಿಂಸೆ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಯಾಲಾಗಿದೆ ಎನ್ನುವ ವಿಷಯ ಹರಿದಾಡುತ್ತಿದೆ.

    ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಡೆತ್‍ನೋಟ್ ಸಿಕ್ಕಿರುವ ಬಗ್ಗೆ ನಿರಾಕರಿಸಿದ್ದರು. ಆದರೆ, ಒಂದು ಪೇಪರ್ ಸಿಕ್ಕಿದೆ. ಅದನ್ನು ಡೆತ್‍ನೋಟ್ ಎನ್ನಲಾಗದು ಎಂದು ಹೇಳಿದ್ದರು.

    ಇದನ್ನೂ ಓದಿ: ಐದು ಜನರ ಅಸ್ಥಿಪಂಜರ ಪ್ರಕರಣ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದೇನು ?

    ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ

    ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ

    ತನಿಖೆ, ಸಾಕ್ಷ್ಯಾಧಾರಗಳ ರಕ್ಷಣೆ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಮಾಧ್ಯಮಗಳಿಗೆ ಈ ರೀತಿಯ ಪ್ರತಿಕ್ರಿಯೆ ನೀಡಿರಬಹುದು. ಡೆತ್‍ನೋಟ್‍ನಲ್ಲಿರುವ ವ್ಯಕ್ತಿಗಳ ಪತ್ತೆಗೂ ಆಗಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗುತ್ತಿದೆ.

    ತಮ್ಮ ಜಮೀನು ವಿವಾದದ ಕಾರಣಕ್ಕೆ ಜಗನ್ನಾಥ ರೆಡ್ಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕಾರಣಕ್ಕೆ ಕಿರುಕುಳ ಇತ್ತೇ ಎನ್ನುವುದು ಗೊತ್ತಾಗಬೇಕಿದೆ.

    ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕುಟುಂಬ:

    ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿ.

    ಮೊದಲ ಮಗ ಡಾ.ಮಂಜುನಾಥ್ ರೆಡ್ಡಿ ಸಾವು ಅವರಿಗೆ ದುಃಖ ತರಿಸಿತ್ತು. ಅದರೊಟ್ಟಿಗೆ ಕೊನೆಯ ಪುತ್ರ ನರೇಂದ್ರ ರೆಡ್ಡಿ ಮೇಲೆ ಬೆಂಗಳೂರಿನ ಬಿಡದಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿ ಬಂಧನಕ್ಕೂ ಒಳಗಾಗಿದ್ದರು. ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಈ ವಿಚಾರವೂ ಅವರನ್ನು ದೃತಿಗೆಡಿಸಿತ್ತು.

    ಪುತ್ರಿ ತ್ರಿವೇಣಿ

    ಪುತ್ರಿ ತ್ರಿವೇಣಿ

    ಇನ್ನೂ ಜಗನ್ನಾಥ ರೆಡ್ಡಿ ಅವರ ಪತ್ನಿ ಪ್ರೇಮಲೀಲಾ ಅವರಿಗೆ ಮಗಳ ಮದುವೆ ವಿಚಾರ ಕಂಗೆಡಿಸಿತ್ತು. ಮಗಳು ತ್ರಿವೇಣಿ ಅವರಿಗೆ ಮದುವೆ ಮಾಡಬೇಕು ಎನ್ನುವಾಗಲೇ ಅವರಿಗೆ ಸ್ಪೈನಲ್ ಕಾರ್ಡ್ ಸಮಸ್ಯೆ ಶುರುವಾಗಿತ್ತು. ಸಾಕಷ್ಟು ಖರ್ಚು ಮಾಡಿದರೂ ಆರೋಗ್ಯ ಸರಿಯಾಗಿರಲಿಲ್ಲ. ಇದರೊಟ್ಟಿಗೆ ಉಳಿದ ಇಬ್ಬರು ಮಕ್ಕಳಾದ ಕೃಷ್ಣಾ ರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಕೂಡಾ ಮದುವೆ ಆಗಿರಲಿಲ್ಲ.

    ಎಲ್ಲರೂ ಮಕ್ಕಳ ಮದುವೆ ಬಗ್ಗೆ ವಿಚಾರಿಸುತ್ತಾರೆ ಎನ್ನುವ ಕಾರಣಕ್ಕೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಸಂಬಂಧಿಕರ ಯಾವುದೇ ಕಾರ್ಯಕ್ರಮಗಳಿಗೂ ಹಾಜರಾಗುತ್ತಿರಲಿಲ್ಲ. ಯಾರಾದರೂ ಆಹ್ವಾನ ಪತ್ರಿಕೆಗಳನ್ನು ಕೊಡಲು ಹೋದರೆ ಕಿಟಕಿಯಲ್ಲೇ ಪಡೆದುಕೊಂಡು ಕಳಿಸುತ್ತಿದ್ದರು ಎನ್ನುವ ಅಂಶಗಳು ಬೆಳಕಿಗೆ ಬಂದಿವೆ.

    ಸಾರ್ವಜನಿಕ ಸಂಪರ್ಕ ಕಳೆದುಕೊಂಡು ಮನೆಯಲ್ಲೇ ಬಾಕಿಯಾದ ಐದು ಜನ ಒಂದೇ ರೀತಿಯ ಆಲೋಚನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯೂ ಇದೆ. ಈ ಹಿಂದೆ ನಾವು ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬರಿಗೆ ಸಮಸ್ಯೆಯಾದರೂ ಯಾರೂ ಇರುವುದಿಲ್ಲ ಎನ್ನುವ ಮಾತುಗಳನ್ನು ಕೃಷ್ಣಾರೆಡ್ಡಿ ಹೇಳುತ್ತಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಿದ್ದಾರೆ.

    ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಜಗನ್ನಾಥ ರೆಡ್ಡಿ ಅವರ ಮನೆಯಲ್ಲಿ ಸಿಕ್ಕಿರುವ ಐದು ಅಸ್ಥಿ ಪಂಜರಗಳು ಅವರ ಕುಟುಂಬಕ್ಕೆ ಸೇರಿರಬಹುದು ಎನ್ನುವ ಬಲವಾದ ಅನುಮಾನ ವ್ಯಕ್ತವಾಗಿದೆ.

    ಪೊಲೀಸರು ಇಡೀ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಇಂದು ಪೋಸ್ಟ್‍ಮಾರ್ಟಮ್ ನಡೆಯಲಿದೆ. ಆನಂತರ ಎಫ್‍ಎಸ್‍ಎಲ್ ವರದಿ ಬರಲಿದ್ದು, ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

    ಇನ್ನೂ ಮೃತರು ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಎನ್ನುವುದನ್ನು ಅಧಿಕೃತವಾಗಿ ಪತ್ತೆ ಮಾಡಲು ಡಿಎನ್‍ಎ ಪರೀಕ್ಷೆಯನ್ನೂ ಮಾಡಬೇಕಾಗುತ್ತದೆ ಎನ್ನಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top