Connect with us

    ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಸರಳ ಆಚರಣೆ; ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಮುಖ್ಯ ಸುದ್ದಿ

    ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಸರಳ ಆಚರಣೆ; ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಚಿತ್ರದುರ್ಗನ್ಯೂಸ್.ಕಾಂ

    ಜಿಲ್ಲೆಯ ಭರಮಸಾಗರದಲ್ಲಿ ಮುಂದಿನ ಫೆಬ್ರುವರಿ ತಿಂಗಳಲ್ಲಿ ನಿಗದಿಯಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ತೀವ್ರ ಬರಗಾಲದ ಕಾರಣ ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

    ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣ ನಾಯಕ ಕೆರೆ ವೀಕ್ಷಣೆ ನಂತರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘2024ರ ಫೆಬ್ರುವರಿ 16ರಿಂದ 24ರವರೆಗೆ ಭರಮ ಸಾಗರದಲ್ಲಿ ಉತ್ಸವ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಪ್ರಸಕ್ತ ವರ್ಷ ತೀವ್ರ ಬರಗಾಲ ಆವರಿಸಿದ್ದರಿಂದ ಸಿರಿಗೆರೆಯ ತರಳಬಾಳು ಮಠದಲ್ಲಿಯೇ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತದೆ. ಭರಮಸಾಗರದಲ್ಲಿ 2025ರಲ್ಲಿ ಉತ್ಸವ ಆಚರಿಸಲಾಗುವುದು’ ಎಂದರು.

    ‘ರಾಜ್ಯ ಭೀಕರ ಬರ ಎದುರಿಸುತ್ತಿದೆ. ಜನರು ಸಂಕಷ್ಟದಲ್ಲಿದ್ದಾರೆ. ಜನರು ಕಷ್ಟದಲ್ಲಿರುವಾಗ ವಿಜೃಂಭಣೆಯ ಮಹೋತ್ಸವ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

    ‘ಭರಮಸಾಗರ ಏತ ನೀರಾವರಿ ಯೋಜನೆ ವಿನೂತನವಾದದ್ದು. ಇದರಲ್ಲಿ ಸಾಧ್ಯವಾದ ಎಲ್ಲಾ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಲಾಗಿದೆ. ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿಲ್ಲದೇ ಇದ್ದಲ್ಲಿ ಇಷ್ಟೊತ್ತಿಗೆ ಕೆರೆ ತುಂಬಿ ನೋಡುಗರ ಕಣ್ಮನ ಸೆಳೆಯುತ್ತಿತ್ತು’ ಎಂದರು.

    ‘ಕೆಲವರು ಯೋಜನೆಗೆ ತಮ್ಮ ಹೆಸರನ್ನು ಇಡಲು ಪ್ರಸ್ತಾಪ ಮಾಡುತ್ತಿದ್ದಾರೆ. ಭರಮಸಾಗರದ ಐತಿಹಾಸಿಕ ಕೆರೆಯನ್ನು 300 ವರ್ಷಗಳ ಹಿಂದೆ ನಿರ್ಮಿಸಿದವರು ಭರಮಣ್ಣನಾಯಕರು. ಅವರ ಹೆಸರೇ ಮುಂದುವರೆಯಬೇಕು’ ಎಂದು ತಿಳಿಸಿದರು.

    ‘ಯೋಜನೆಯ ತುರ್ತು ಕೆಲಸಗಳನ್ನು ನಿರ್ವಹಿಸಲು ಸರ್ಕಾರವನ್ನೇ ನಂಬಿಕೊಂಡು ಇರಬಾರದು. ಅದಕ್ಕಾಗಿ ಎಲ್ಲಾ ಕೆರೆಗಳ ಬಳಕೆದಾರರ ಸಂಘವನ್ನು ರಚನೆ ಮಾಡಬೇಕು. ಅವುಗಳ ನಿರ್ವಹಣೆಗಾಗಿ ಆಪತ್‌ ನಿಧಿ ಸಂಗ್ರಹಿಸಿಡಬೇಕು’ ಎಂದು ಹೇಳಿದರು.

    ಧಾರವಾಡದ ಇಂಡಿಯನ್‌ ನೆಟ್‌ವರ್ಕ್‌ ಆಫ್‌ ಪಾರ್ಟಿಸಿಪೇಟರಿ ಇರಿಗೇಷನ್‌ ಮ್ಯಾನೇಜ್‌ಮೆಂಟ್‌ ಅಧ್ಯಕ್ಷ ರಾಜೇಂದ್ರ ಪೊದ್ದಾರ್‌ ಮಾತನಾಡಿ,‘ಹವಾಮಾನದಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದ ಭೂಮಿ, ಜಲ ಮತ್ತು ಪಕ್ಷಿಸಂಕುಲಗ ಳಿಗೆ ಗಂಡಾಂತರ ಎದುರಾಗಿದೆ. ಮುಂದೆ ನೀರಿಗಾಗಿ ಪರಿತಪಿಸುವಂತಹ ದಿನಗಳು ಬರುತ್ತವೆ. ಹವಾಮಾನ ಏರುಪೇರಿನ ಕಾರಣದಿಂದ ನೀರಿನ ಕೊರತೆ ಉಂಟಾಗಲಿದೆ. ಶುದ್ಧ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಲಿದೆ. ನೀರಿನ ಮಹತ್ವವನ್ನು ಅರಿತು ಪ್ರತಿ ಹನಿ ನೀರನ್ನೂ ರಕ್ಷಣೆ ಮಾಡಬೇಕು ಮತ್ತು ಮಿತವಾಗಿ ಬಳಸಬೇಕು’ ಎಂದು ಸಲಹೆ ನೀಡಿದರು.

    ‘56 ಕಿ.ಮೀ. ದೂರದ ಭರಮಸಾಗರ ಏತ ನೀರಾವರಿ ಯೋಜನೆಗೆ ₹600 ಕೋಟಿಯನ್ನು ಸರ್ಕಾರ ವೆಚ್ಚ ಮಾಡಿದೆ. ಇದು ಜನರ ತೆರಿಗೆಯ ಹಣ. ಅದನ್ನು ಅರಿತು ಜನರು ಅಪವ್ಯಯವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಜನರ ಹಣ ಅಪವ್ಯಯವಾದಂತೆ ಆಗುತ್ತದೆ’ ಎಂದರು.

    ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಎಚ್.‌ ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.‌ ಚಂದ್ರಪ್ಪ, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಜಿ.ಬಿ. ತೀರ್ಥಪ್ಪ, ಶಶಿ ಪಾಟೀಲ್‌ ಮಾತನಾಡಿದರು. ಕಾಂಗ್ರೆಸ್‌ ಮುಖಂಡ ತಿಪ್ಪೇಸ್ವಾಮಿ, ಡಿ.ವಿ. ಶರಣಪ್ಪ, ಎಚ್.ಬಿ. ಮಲ್ಲಪ್ಪ, ಮಾಜಿ ಶಾಸಕ ಎಚ್.ಪಿ. ರಾಜೇಶ್‌, ಮಂಜುನಾಥ್‌, ಮನೋಜ್‌ಕುಮಾರ್‌, ಸಿ.ಆರ್.‌ ನಾಗರಾಜ್‌, ಇತರರು ಭಾಗವಹಿಸಿದ್ದರು.

    107 ಕೆರೆಗಳಿಗೆ ನೀರುಣಿಸಬೇಕಾದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿ ಕುಂಠಿತವಾಗಿದೆ. ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ ಸಭೆಗಳು ನಡೆದಿವೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೀರಾವರಿ ಯೋಜನೆಗಳನ್ನು ಸರ್ಕಾರ ಆದ್ಯತೆಯ ಮೇಲೆ ಪೂರೈಸಬೇಕು.
    – ಜಿ.ಎಂ.ಸಿದ್ದೇಶ್ವರ, ಸಂಸದ, ದಾವಣಗೆರೆ

     

    ರಾಜ್ಯದಲ್ಲಿಯೇ ಇದೊಂದು ವಿನೂತನ ಯೋಜನೆ. 56 ಕಿ.ಮೀ. ದೂರದ ರೈಸಿಂಗ್‌ ಮೇನ್‌ ಇರುವಂತಹ ಯೋಜನೆ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲ. ಈ ಯೋಜನೆಯನ್ನು ಕೇವಲ 2 ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ತರಳಬಾಳು ಶ್ರೀಗಳ ಇಚ್ಛಾಶಕ್ತಿ ಮತ್ತು ಅವರು ಹೆಜ್ಜೆಹೆಜ್ಜೆಗೂ ತೋರಿದ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ.
    – ಮಲ್ಲಿಕಾರ್ಜುನ ಗುಂಗೆ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಅಧ್ಯಕ್ಷ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top