ಮುಖ್ಯ ಸುದ್ದಿ
ಝಗಮಗಿಸುವ ಮುರುಘಾ ಮಠದ ಪೋಟೋ ಗ್ಯಾಲರಿ | ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮಠ
ಚಿತ್ರದುರ್ಗ ನ್ಯೂಸ್.ಕಾಂ: ಮಧ್ಯ ಕರ್ನಾಟಕದ ದಸರಾ ಉತ್ಸವ ಎಂದೇ ಹೆಸರಾಗಿರುವ ಚಿತ್ರದುರ್ಗ ಮುರುಘಾ ಮಠ ಶರಣ ಸಂಸ್ಕøತಿ ಉತ್ಸವದ ಅಂಗವಾಗಿ ಝಗಮಗಿಸುತ್ತಿದೆ.
11 ದಿನಗಳ ಕಾಲ ಮುರುಘಾ ಮಠದಲ್ಲಿ ಉತ್ಸವ ನಡೆಯುತ್ತಿತ್ತು. ಕ್ರೀಡೆ, ಕೃಷಿ, ಮಹಿಳಾ ಸಬಲೀಕರಣ, ಮಕ್ಕಳ ಮನರಂಜನೆ, ಯುವಜನತೆ, ವಿಚಾರಗಳು, ಅವಲೋಕನಗಳು ಹೀಗೆ ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿವರೆಗೆ ಮಠದಲ್ಲಿ ಕಾರ್ಯಕ್ರಮಗಳ ಹೂರಣವೇ ಇರುತ್ತಿತ್ತು.
ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಆಚರಣೆಗೆ ಮುರುಘಾ ಶರಣರ ಪ್ರಕರಣದ ಕಾರಣಕ್ಕೆ ಮಸುಕು ಕವಿದಿದೆ. ಕಳೆದ ವರ್ಷ ಸಾಂಕೇತಿಕ ಉತ್ಸವಕ್ಕೆ ಸೀಮಿತವಾದರೆ, ಈ ವರ್ಷ ಸರಳ ಉತ್ಸವ ಎಂದು ನಡೆಸಲಾಗುತ್ತಿದೆ.
11 ದಿನಗಳ ಉತ್ಸವವನ್ನು 5 ದಿನಗಳಿಗೆ ಸರಳೀಕರಣಗೊಳಿಸಿದ್ದು, ಅ.21 ರಂದು ಬೆಳಗ್ಗೆ ಬೆಂಗಳೂರು ಬಸವಕೇಂದ್ರದ ಶ್ರೀ ಅರವಿಂದ ಜತ್ತಿ ಅವರಿಂದ ಬಸವ ತತ್ವ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಅಲ್ಲಿಂದ ಕೃಷಿ ಮೇಳ, ರೈತರ ಕಾರ್ಯಕ್ರಮ, ಮಹಿಳಾ ಕ್ರೀಡಾಕೂಟ, ಬಸವ ತತ್ವ ಸಮಾವೇಶಗಳ ಮೂಲಕ ಉತ್ಸವ ರಂಗು ಪಡೆದುಕೊಂಡಿದೆ.
ಶರಣ ಸಂಸ್ಕøತಿ ಉತ್ಸವದ ಅಂಗವಾಗಿ ಮುರುಘಾ ಮಠ ಝಗಮಗಿಸುತ್ತಿರುವುದು ಎಲ್ಲದಕ್ಕಿಂತ ವಿಶೇಷ. ಕಾರಣ ಕಳೆದೊಂದು ವರ್ಷದಿಂದ ಮಠದಲ್ಲಿ ಅಂತಹ ಕಳೆಗಟ್ಟುವ ವಾತಾವರಣ ಕಾಣಿಸುತ್ತಿರಲಿಲ್ಲ.
ಇದನ್ನೂ ಓದಿ: ಮುರುಗಿ ಶಾಂತವೀರ ಸ್ವಾಮಿಗಳ ಹೊಸ ಕಂಚಿನ ಪ್ರತಿಮೆ ಅನಾವರಣ
ಈಗ ಉತ್ಸವದ ಕಾರಣಕ್ಕೆ ಮುರುಘಾ ಮಠ, ಸುತ್ತಮುತ್ತಲಿನ ಕಟ್ಟಡಗಳು, ರಸ್ತೆಗಳು, ಗಿಡಮರಗಳಿಗೆ ಬೆಳಕಿನ ಅಲಂಕಾರ ಮಾಡಿರುವುದು ನೋಡಲು ನಯನ ಮನೋಹರವಾಗಿದೆ.
ಮುರುಘಾ ಮಠದ ಉಸ್ತುವಾರಿಗಳಾ ಶ್ರೀ ಬಸವಪ್ರಭು ಸ್ವಾಮೀಜಿ, ಮಠದ ಆಡಳಿತಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ರೇಖಾ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ, ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್ ಹಾಗೂ ಉಪಾಧ್ಯಕ್ಷ ಹಾಗೂ ವಿದ್ಯಾಪೀಠದ ಸಿಇಒ ಭರತ್ಕುಮಾರ್ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ.
ಶೂನ್ಯಪೀಠಾರೋಹಣ ಮಠದಲ್ಲಿ ವಿಶೇಷ ಕಾರ್ಯಕ್ರಮವಾಗಿದ್ದು, ಮಠದ ಪೀಠಾಧಿಪತಿಗಳು ಶೂನ್ಯ ಪೀಠಾರೋಹಣ ಮಾಡುವುದು ಸಂಪ್ರದಾಯ. ಕಳೆದ ವರ್ಷ ಮುರುಘಾ ಮಠದ ಕರ್ತೃಗಳಾದ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಭಾವಚಿತ್ರ ಇಟ್ಟು ಕಾರ್ಯಕ್ರಮ ನಡೆಸಲಾಗಿತ್ತು. ಈ ವರ್ಷ ಪೀಠಾರೋಹಣಕ್ಕಾಗಿ ಮುರಿಗಿ ಶಾಂತವೀರ ಸ್ವಾಮಿಗಳ ವಿಶೇಷವಾದ ಕಂಚಿನ ಪ್ರತಿಮೆ ಅನಾವರಣವಾಗಿದೆ.
ಇನ್ನೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಹಿಂದಿನ ಗುರುಗಳ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ, ಮುರುಘಾ ಶರಣರು ಈ ಪದ್ಧತಿ ಕೈ ಬಿಟ್ಟು, ವಚನಗಳ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿಸುತ್ತಿದ್ದರು.
ಉತ್ಸವದ ಕೊನೆಯ ದಿನ ಮುರುಘಾ ಮಠದಿಂದ ಕೋಟೆಯವರೆಗೆ ಬೃಹತ್ ಮೆರವಣಿಗೆ ನಡೆಯುತ್ತಿತ್ತು. ಆದರೆ, ಈ ವರ್ಷ ಮೆರವಣಿಗೆ ರದ್ದು ಮಾಡಲಾಗಿದೆ. ಬದಲಾಗಿ ವಾಹನಗಳಲ್ಲಿ ಕೋಟೆಗೆ ತೆರಳಿ, ಅಲ್ಲಿರುವ ಹಳೆಯ ಮುರುಘಾ ಮಠದ ಆವರಣದಲ್ಲಿ ರಾಜ ವಂಶಸ್ಥರಿಂದ ಗೌರವ ಸ್ವೀಕರಿಸಲಾಗುತ್ತದೆ.