ಕ್ರೈಂ ಸುದ್ದಿ
ಹಿರಿಯೂರು ಅಪಘಾತದ FOLLOWUP | ಮದುವೆಗೆ ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ತೆರಳುತ್ತಿದ್ದ ಯುವಕನ ಧಾರುಣ ಸಾವು
ಚಿತ್ರದುರ್ಗ ನ್ಯೂಸ್.ಕಾಂ: ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ವೇಗದ ಚಾಲನೆಯಿಂದ ಹಿರಿಯೂರು ತಾಲೂಕು ಗೊಲ್ಲಹಳ್ಳಿ ಬಳಿ ಸೆ.11 ಸೋಮವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಈವರೆಗೆ ಒಟ್ಟು 5 ಜನ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಆದರೆ, ಮೃತರಲ್ಲಿ 23 ವರ್ಷದ ರವಿ ಎಂಬ ಯುವಕನೂ ಇದ್ದು, ಬೆಂಗಳೂರಿನಿಂದ ಸ್ವಗ್ರಾಮ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಾಲಾಪುರಕ್ಕೆ ಹೆಣ್ಣು ನೋಡುವ ಶಾಸ್ತ್ರಕ್ಕಾಗಿ ತೆರಳಿ ಬೆಂಗಳೂರಿಗೆ ವಾಪಾಸಾಗುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ರವಿ ತನ್ನ ಸಹೋಧರ ಶಿವರಾಜ್ ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ಶಿವರಾಜ್ ಚಾಲಕನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದರೆ, ರವಿ ಚಾಲಕನ ಎಡ ಭಾಗದಲ್ಲಿ ಗಾಜಿನ ಮುಂದೆ ಕುಳಿತಿದ್ದ. ಬಸ್ಸಿನ ಎಡ ಭಾಗವೇ ಲಾರಿಗೆ ಅಪ್ಪಳಿಸಿದ್ದರಿಂದ ರವಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಹಿರಿಯೂರು ಬಳಿ ksrtc ಬಸ್ ಲಾರಿ ನಡುವೆ ಭೀಕರ ಅಪಘಾತ ನಾಲ್ಕು ಜನರ ಸಾವು
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಸೇರಿದಂತೆ ಮೂರು ಜನ ಸಹೋಧರರು ಕುಟುಂಬದಲ್ಲಿದ್ದು, ಮೊದಲನೆ ಮಗ ರವಿಯಾಗಿದ್ದ. ಅವನ ಮದುವೆ ಸಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದ ಹೆಣ್ಣು ನೋಡಿ, ಎರಡು ದಿನ ಊರಿನಲ್ಲಿ ಮನೆಯವರು, ಸ್ನೇಹಿತರೊಂದಿಗೆ ಕಳೆದು ಭಾನುವಾರ ಬೆಂಗಳೂರಿಗೆ ಬರಲು ಬಸ್ಸು ಹತ್ತಿದ್ದ. ಆರಂಭದಲ್ಲೇ ಬಸ್ಸಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಮಸ್ಕಿ ಡಿಪೋದಲ್ಲಿ ಬಸ್ ಬದಲಾಯಿಸಲಾಗಿತ್ತು. ಆದರೆ, ಚಾಲಕನ ಅವಾಂತರದಿಂದ ಚಿತ್ರದುರ್ಗದ ಬಳಿ ಬಂದು ಅಪಘಾತ ನಡೆದಿದ್ದು, ಮದುವೆಯ ಕನಸು ಕಾಣುತ್ತಿದ್ದ ರವಿ ಸೂರ್ಯ ಉದಯಿಸುವ ಮುನ್ನವೇ ಅಸ್ತಂಗತನಾಗಿದ್ದಾನೆ. ಎರಡು ದಿನಗಳ ಹಿಂದಷ್ಟೇ ಊರ ತುಂಬಾ ನಗು ನಗುತ್ತಾ ಓಡಾಡಿದ್ದ ರವಿಯ ಅಂತ್ಯ ಕಂಡು ಇಡೀ ಹಾಲಾಪುರ ಮುಮ್ಮಲ ಮರುಗಿದೆ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)