ಮುಖ್ಯ ಸುದ್ದಿ
280 ಮೀಟರ್ ಡಿವೈಡರ್ ತೆರವು | ಮುನ್ನೆಲೆಗೆ ಬಂದ ರಸ್ತೆ ವಿಸ್ತರಣೆ ಚರ್ಚೆ
CHITRADURGA NEWS | 11 FEBRUARY 2024
ಚಿತ್ರದುರ್ಗ: ನಗರದಲ್ಲಿ ಶುಕ್ರವಾರ ರಾತ್ರಿಯಿಂದ ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳ ಸಮ್ಮುಖದಲ್ಲಿ ಪ್ರಾರಂಭವಾಗಿರುವ ರಸ್ತೆ ವಿಭಜಕ (ಡಿವೈಡರ್) ತೆರವು ಕಾರ್ಯಾಚರಣೆ ಭಾನುವಾರ ರಾತ್ರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆಯ ವಿಚಕ್ಷಣಾ ದಳದ ವರದಿ ಆಧರಿಸಿ ನಗರದ ಆರು ಸ್ಥಳಗಳಲ್ಲಿ ತೆರವು ಕಾರ್ಯ ನಡೆಯುತ್ತಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತದ ವರೆಗೆ 170 ಮೀಟರ್, ಜೆಸಿಆರ್ ಮುಖ್ಯ ರಸ್ತೆಯ ಗಾಯತ್ರಿ ವೃತ್ತದ ಸಮೀಪ 25 ಮೀಟರ್ ಹಾಗೂ ಅರಣ್ಯ ಇಲಾಖೆ ಕಚೇರಿ ಎದುರು 15 ಮೀಟರ್, ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಸಮೀಪದಿಂದ ವಿ.ಪಿ.ಬಡಾವಣೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ 15 ಮೀಟರ್, ಮದಕರಿ ನಾಯಕ ವೃತ್ತದ ಸಮೀಪದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ಕಚೇರಿ ಮುಂಭಾಗ 15 ಮೀಟರ್ ಹಾಗೂ ಚಳ್ಳಕೆರೆ ಗೇಟ್ ಸಮೀಪ 40 ಮೀಟರ್ ವಿಭಜಕ ತೆರವುಗೊಳಿಸಲಾಗುತ್ತಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ.
ಜೆಸಿಬಿ ಸೇರಿ ಭಾರಿ ಯಂತ್ರಗಳ ನೆರವಿನಿಂದ ವಿಭಜಕಗಳನ್ನು ಒಡೆದು ಹಾಕಲಾಗುತ್ತಿದೆ. ತ್ಯಾಜ್ಯವನ್ನು ನಗರದ ಹೊರಗೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸೋಮವಾರದಿಂದ ನಗರದಲ್ಲಿ ಸುಗುಮ ಸಂಚಾರ ಸಾಧ್ಯವಾಗಲಿದೆ.
ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ರಸ್ತೆ ವಿಭಜಕ ನಿರ್ಮಿಸಲಾಗಿತ್ತು. ಈ ವಿಭಜಕಗಳ ಗಾತ್ರ, ನಿರ್ಮಾಣವಾದ ಸ್ಥಳದ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಬದಲು ಸಂಚಾರ ಸಮಸ್ಯೆ ಸೃಷ್ಟಿಸಿದೆ ಎಂಬ ಆರೋಪವೂ ಕೇಳಿಬಂದಿತ್ತು. ಅಧಿಕಾರಕ್ಕೆ ಬಂದರೆ ವಿಭಜಕಗಳನ್ನು ತೆರವುಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ಬಿ.ಡಿ.ರಸ್ತೆ, ಹೊಳಲ್ಕೆರೆ ರಸ್ತೆ, ದಾವಣಗೆರೆ ಮಾರ್ಗ, ಜೆಸಿಆರ್ ಮುಖ್ಯ ರಸ್ತೆ, ತುರುವನೂರು ರಸ್ತೆ ಹಾಗೂ ಜೋಗಿಮಟ್ಟಿ ರಸ್ತೆಯಲ್ಲಿ ವಿಭಜಕಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ರಸ್ತೆಗಳಲ್ಲಿ 6 ಕಿ.ಮೀ ಉದ್ದದ ವಿಭಜಕವಿದೆ. ಇದಕ್ಕೆ ₹ 3.4 ಕೋಟಿ ವೆಚ್ಚವಾಗಿದೆ. ಇದರಲ್ಲಿ ಅಂದಾಜು 280 ಮೀಟರ್ ವಿಭಜಕವನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಇಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಯಮಾವಳಿಗೆ ವಿರುದ್ಧವಾಗಿ ವಿಭಜಕ ನಿರ್ಮಿಸಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ದುರ್ಗಕ್ಕೆ ಆಗಮನ | ಪ್ರತಿಭಟನನಿರತ ರೈತರ ಭೇಟಿ
ನಗರದಲ್ಲಿ ನಿರ್ಮಾಣವಾಗಿರುವ ಎಲ್ಲ ರಸ್ತೆ ವಿಭಜಕ ತೆರವಿಗೆ ಶಾಸಕ ಕೆ.ಸಿ.ವೀರೇಂದ್ರ ಪಟ್ಟುಹಿಡಿದಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ದೂರು ಸಲ್ಲಿಸಿದ್ದರು. ವಿಧಾನಮಂಡಲದ ಅಧಿವೇಶನದಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು. ವಿಭಜಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ವಿಚಕ್ಷಣಾ ದಳಕ್ಕೆ ಸರ್ಕಾರ ಸೂಚನೆ ನೀಡಿತ್ತು.
2023ರ ನವೆಂಬರ್‌ನಲ್ಲಿ ನಗರಕ್ಕೆ ಭೇಟಿ ನೀಡಿದ್ದ ವಿಚಕ್ಷಣಾ ದಳ, ವಿಭಜಕಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಇದರ ಆಧಾರದ ಮೇರೆಗೆ ಗುತ್ತಿಗೆದಾರರಿಗೆ ನೀಡಬೇಕಿದ್ದ ಕಾಮಗಾರಿಯ ಬಿಲ್ ತಡೆಹಿಡಿಯಲಾಗಿತ್ತು. ವಿಭಜಕ ನಿರ್ಮಿಸಿದ ಗುತ್ತಿಗೆದಾರರಿಂದಲೇ ತೆರವು ಕಾರ್ಯ ನಡೆಸಲಾಗುತ್ತಿದೆ. ತೆರವಿಗೆ ಪ್ರತ್ಯೇಕ ವೆಚ್ಚ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ಪ್ರಮುಖ ರಸ್ತೆಗಳ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ವಿಭಜಕ ತೆರವಿಗೆ ತೋರಿದ ಉತ್ಸಾಹವನ್ನು ಜನಪ್ರತಿನಿಧಿಗಳು ರಸ್ತೆ ವಿಸ್ತರಣೆಗೂ ತೋರುವರೇ ಎಂಬ ಚರ್ಚೆ ಆರಂಭವಾಗಿದೆ.