Connect with us

    ಕಲ್ಲು ಗಣಿ ಗುತ್ತಿಗೆ ಮಂಜೂರಾತಿಗೆ 160 ಅರ್ಜಿ ಬಾಕಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌

    dc

    ಮುಖ್ಯ ಸುದ್ದಿ

    ಕಲ್ಲು ಗಣಿ ಗುತ್ತಿಗೆ ಮಂಜೂರಾತಿಗೆ 160 ಅರ್ಜಿ ಬಾಕಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌

    CHITRADURGA NEWS | 21 JUNE 2024
    ಚಿತ್ರದುರ್ಗ: ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಮಂಜೂರಾತಿಗೆ 160 ಅರ್ಜಿಗಳು ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್‌ (ಗಣಿ) ಸಮಿತಿ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್‌ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ‘ಗುತ್ತಿಗೆ ಮಂಜೂರಾತಿಗೆ ಒಂದು ತಿಂಗಳೊಳಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಿರಾಪೇಕ್ಷಣ ಪತ್ರ ನೀಡಬೇಕು. ಬಾಕಿ ಇರುವ ಅರ್ಜಿಗಳನ್ನು ಪಟ್ಟಿ ಮಾಡಿ ಮುಂದಿನ ಸಭೆಯೊಳಗೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

    ‘ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಗೆ ನಿಗಧಿಪಡಿಸಿರುವ ರಾಜಸ್ವದ ಗುರಿ ಸಾಧಿಸಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು’ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ಹಳ್ಳಿಹಳ್ಳಿಗೂ ಯೋಗ ಪಸರಿಸಿದ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ | ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌

    ‘ಜಿಲ್ಲಾ ಮತ್ತು ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಪ್ರತ್ಯಾಜಿಸಲಾದ ಅಧಿಕಾರದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ತಡೆಯುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಪ್ರಕರಣ ದಾಖಲಿಸಲು ಕ್ರಮವಹಿಸಬೇಕು’ ಎಂದು ಹೇಳಿದರು.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್‌ ಮಾತನಾಡಿ, ‘ವೇದಾಂತ ಮಿನರಲ್ಸ್‌ ಅವರು ಗಣಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ ಕಾರಣ ಇಲಾಖೆ ಇಲಾಖೆ ಗುರಿ ತಲುಪಲು ಸಾಧ್ಯವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ನಿಗಧಿಪಡಿಸಿರುವ ರಾಜಸ್ವ ಗುರಿ ತಲುಪಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

    ಜಿಲ್ಲೆಯ ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ನದಿ ಪಾತ್ರದಲ್ಲಿ ಟೆಂಡರ್-ಕಂ-ಹರಾಜು ಮೂಲಕ ಮಂಜೂರು ಮಾಡಲಾದ ಮರಳು ಗಣಿ ಗುತ್ತಿಗೆ, ಮರಳು ಲೈಸೆನ್ಸ್ ಪ್ರದೇಶಗಳ ಅವಧಿಯು ಮುಕ್ತಾಯಗೊಂಡಿದ್ದು, ಕೆಲವೊಂದು ಮರಳು ಸ್ಟಾಕ್ ಯಾರ್ಡ್ ಪ್ರದೇಶಗಳಲ್ಲಿ ದಾಸ್ತಾನಿರುವ ಮರಳು ವಿಲೇವಾರಿ ಮಾಡುವ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗುಣಮಟ್ಟದ ವರದಿ ಪಡೆದು ಕ್ರಮವಹಿಸಲು ಸಭೆಯು ಸೂಚಿಸಿತು.

    ಕ್ಲಿಕ್ ಮಾಡಿ ಓದಿ: ಮನಸ್ಸಿನ ಹತೋಟಿಗೆ ಯೋಗ ಸಹಕಾರಿ |ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿನ ಪಟ್ಟಾ ಜಮೀನುಗಳಲ್ಲಿ ಮರಳು ಗಣಿ ಗುತ್ತಿಗೆ ಕೋರಿ ಸ್ವೀಕೃತಿಯಾದ ಅರ್ಜಿಗಳ ಮಂಜೂರಾತಿಗೆ ನಿಯಾಮಾನುಸಾರ ಕ್ರಮವಹಿಸಲು ಸಭೆಯು ಸೂಚಿಸಿತು.

    ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಹಾಗೂ ಪಟ್ಟಾ ಜಮೀನುಗಳಲ್ಲಿ ದಾಸ್ತಾನಿರಿಸಲಾಗಿರುವ ಕಬ್ಬಿಣದ ಅದಿರು ರಾಶಿಗಳನ್ನು ನಿಯಮಾನುಸಾರ ವಿಲೇಪಡಿಸಲು ಹಾಗೂ ಕಂದಾಯ, ಅರಣ್ಯ ಇಲಾಖೆ ವತಿಯಿಂದ ನಿರಾಪೇಕ್ಷಣ ಪತ್ರ ಸ್ವೀಕೃತಿಯಾದ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿಯಾಮಾನುಸಾರ ಕ್ರಮವಹಿಸಲು ಸಭೆಯು ಅನುಮೋದಿಸಿತು.

    ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್‌ ಎಂ.ಕಾಳೇಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್‌.ನಾಗೇಂದ್ರಪ್ಪ, ಭೂ ವಿಜ್ಞಾನಿಗಳಾದ ನಯಾಜ್‌ ಖಾನ್‌, ಉಮಾಪತಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top