ಮುಖ್ಯ ಸುದ್ದಿ
ಜಿಲ್ಲಾ ಕಾರಾಗೃಹದಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ
ಚಿತ್ರದುರ್ಗ ನ್ಯೂಸ್.ಕಾಂ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಈ ದೇಶ ಕಂಡ ಅನಘ್ರ್ಯ ರತ್ನಗಳು ಎಂದು ನ್ಯಾಯವಾದಿ ಹಾಗೂ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್ ಜೋಗಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 154ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ 119ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: ಮಗನ ವೈಭವ ನೋಡಲು ಬಂದ ತಾಯಿ; ಹಿಂದೂ ಮಹಾಗಣಪತಿ ಮಂಟಪದಲ್ಲಿ ಶಕ್ತಿ ದೇವತೆಗಳ ಸಮಾಗಮ
ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮಾಡಿ ಸೆರೆವಾಸ ಅನುಭವಿಸಿದ್ದರು. ಅವರು ಸೆರೆಮನೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಸೆರವಾಸಿಗಳ ಮನಪರಿವರ್ತನೆಯ ಕೆಲಸ ಮಾಡಿದ್ದರು. ಆಗ ಸೆರೆವಾಸಿಗಳು ನಾವು ಸಹ ನಿಮ್ಮ ಹೋರಾಟಕ್ಕೆ ಬರುತ್ತೇವೆ ಎಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾಗಿದ್ದರು. ಇಂತಹ ಅನೇಕ ಘಟನೆಗಳಿಂದಾಗಿ ಸ್ವಾತಂತ್ರ್ಯ ಹೋರಾಟ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿತ್ತು ಎಂದು ಸ್ಮರಿಸಿದರು.
ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯೂ ಆಗಿದೆ. ಭಾರತದ ಎರಡನೆಯ ಪ್ರಧಾನಮಂತ್ರಿಯಾಗಿದ್ದ ಅವರು ಉತ್ತಮ ಆಡಳಿತ ನೀಡಿದರು. ಇದರಿಂದ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ. ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಪರಿಸ್ಥಿತಿಯ ಕೈಗೊಂಬೆಗಳಾಗಿ ಯಾವುದೋ ಸಂದರ್ಭದಲ್ಲಿ ಕೋಪದ ಕೈಗೆ ಬುದ್ದಿ ಕೊಟ್ಟು ಮತ್ತಿತರೆ ಕಾರಣಗಳಿಗೆ ಕಾರಾಗೃಹಕ್ಕೆ ಬಂದಿದ್ದೀರಿ. ಆದರೆ, ಇದು ಸೆರೆಮನೆಯಲ್ಲ. ಪರಿವರ್ತನಾ ಕೇಂದ್ರ. ಇಲ್ಲಿಂದ ಹೊಸ ಬದುಕಿನೊಂದಿಗೆ ಹೋಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಮಹದೇವಿ ಎಂ ಮರಕಟ್ಟೆ ಮಾತನಾಡಿ, ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು. ಲಾಲ್ ಬಹದ್ದೂರ್ ಶಾಸ್ತ್ರೀಜಿ ನೀಡಿದ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ಎಂದೆಂದಿಗೂ ಸ್ಮರಣೀಯ ಎಂದರು.
ಇಂಗಳದಾಳದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿರುವಲ್ಲಪ್ಪ ಮಾತನಾಡಿದರು. ತಾ.ಪಂ. ಮಾಜಿ ಸದಸ್ಯ ಎಚ್.ಲಿಂಗಬಸಪ್ಪ, ನ್ಯಾಯವಾದಿ ಜಿ.ರಮೇಶ್, ಜೈಲರ್ ಶ್ರೀಮಂತಗೌಡ ಪಾಟೀಲ್, ಸಹಾಯಕ ಜೈಲರ್ ರಾಮಣ್ಣ ಹರೆಕಲ್, ಮಂಜು, ಪ್ರವೀಣ್, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಧಿಖಾನೆ ನಿವಾಸಿಗಳಿಗೆ ಹಣ್ಣು ವಿತರಿಸಿ ಜಯಂತಿ ಆಚರಿಸಲಾಯಿತು.